ವಿಪತ್ತು ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಿ
ಗುಳೇದಗುಡ್ಡ,ಜು. 19: ಪ್ರವಾಹಕ್ಕೆ ತುತ್ತಾಗಬಹುದಾದ ತಾಲೂಕಿನ ಗ್ರಾಮಗಳ ಸುರಕ್ಷತೆಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮುಂಗಾರು ಹಂಗಾಮಿನ ವಿಪತ್ತು ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಾಲೂಕು ವಿಪತ್ತು ನಿರ್ವಹಣೆ ನೋಡಲ್ ಅಧಿಕಾರಿ ಎಲ್.ಐ. ರೂಡಗಿ ಸೂಚಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ತಾಲೂಕಿನ ವಿಪತ್ತು ನಿರ್ವಹಣೆ ಕುರಿತು ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಮಂಗಳಾ ಎಂ. ಮಾತನಾಡಿ, ನದಿ ಪಾತ್ರದಲ್ಲಿರುವ ತಾಲೂಕಿನ 12 ಗ್ರಾಮಗಳಲ್ಲಿ ಅನ್ವಯವಾಗುವ ಇಲಾಖಾವಾರು ಅಧಿಕಾರಿ ಹಾಗೂ ಸಿಬ್ಬಂದಿ ನಿರ್ವಹಿಸುವ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ನೈರ್ಮಲ್ಯ, ಕುಡಿಯುವ ನೀರಿನ ಸಂಗ್ರಹದ ಮೂಲದಿಂದ ಹಿಡಿದು ಪೂರೈಕೆ ಆಗುವ ಸ್ಥಳದವರೆಗೂ ನೀರಿನ ಶುದ್ಧತೆ ಪರೀಕ್ಷೆ ಮಾಡಬೇಕು. ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿದ್ದರೆ ಅವುಗಳನ್ನು ದುರಸ್ತಿ ಮಾಡಿಸಬೇಕು. ಅಗ್ನಿಶಾಮಕ ದಳದವರು ಪ್ರವಾಹ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮ ಹಾಗೂ ಬಳಸುವ ಉಪಕರಣಗಳ ಸುಸ್ಥಿತಿ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಹೆಸ್ಕಾಂ ಎಇಇ ಪ್ರಕಾಶ ಪೂಚಗುಂಡಿ, ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ, ತಾಲೂಕು ಪಂಚಾಯಿತಿಯ ಎಸ್.ಎಸ್. ಅಂಗಡಿ, ಆರೋಗ್ಯ ಇಲಾಖೆಯ ಡಾ. ಅನೀಲ ಉಕ್ಕಲಿ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಎಸ್.ಬಂಡಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಎ.ಕೆ. ಮಕಾಂದಾರ, ಅಗ್ನಿಶಾಮಕ ಇಲಾಖೆಯ ಬಿ.ಪಿ. ಮರಡಿ, ಪಿಆರ್‍ಇಡಿ ಇಲಾಖೆಯ ಎ.ಎಸ್. ತೋಪಲಕಟ್ಟಿ ಇದ್ದರು.