ಭಕ್ತಾದಿಗಳಿಂದ ಕೈವಾರ ಕ್ಷೇತ್ರಕ್ಕೆ ದಿನಸಿ ವಿತರಣೆ
ಕೋಲಾರ,ಜು.೧೯- ತಾಲೂಕಿನ ಭಕ್ತಾದಿಗಳು ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ಮಠದಲ್ಲಿ ನಡೆಯುವ ಗುರುಪೂರ್ಣಿಮಾ ಸಲುವಾಗಿ ಅನ್ನ ದಾಸೋಹಕ್ಕೆ ನಗರದ ಎಪಿಎಂಸಿ ಮಾರುಕಟ್ಟೆಯಿಂದ ದಿನಸಿ ಹಾಗೂ ತರಕಾರಿ ಕಳಿಸುವ ಮೂಲಕ ಭಕ್ತಿ ಪರಾಕಷ್ಠೆ ಮೆರೆದರು.
ನಗರಸಭಾ ಸದಸ್ಯ ಕೆ.ಎ.ಅಶ್ವಥ್ ಮಾತನಾಡಿ, ಪುಣ್ಯಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ಮಠದಲ್ಲಿ ಗುರುಪೂರ್ಣಿಮಾ ಪ್ರಯುಕ್ತ ಗುರುಪೂಜಾ ಸಂಗೀತೋತ್ಸವವು ಜು.೧೯ ರಿಂದ ೨೧ ರವರೆಗೆ ಮೂರು ದಿನಗಳ ಕಾಲ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಹಿನ್ನೆಲೆ, ಅನ್ನದಾಸೋಹಕ್ಕೆ ತಾಲೂಕಿನ ಭಕ್ತಾದಿಗಳು ದಿನಸಿ ಹಾಗೂ ತರಕಾರಿಗಳನ್ನು ಚಿಂತಾಮಣಿ ತಾಲೂಕಿನಲ್ಲಿರುವ ಕೈವಾರ ಮಠಕ್ಕೆ ಕಳಿಸಿಕೊಡಲಾಗುತ್ತಿದೆ ಎಂದರು.
ಮಾಜಿ ನಗರಸಭೆ ಸದಸ್ಯ ಹಾಗೂ ವಕೀಲ ರೌತ್ ಶಂಕರಪ್ಪ ಮಾತನಾಡಿ, ಪ್ರತಿವರ್ಷದಂತೆ ಕೈವಾರ ಮಠಕ್ಕೆ ಕೈವಾರ ತಾತನ ಭಕ್ತಾದಿಗಳು ಗುರು ಪೂರ್ಣಿಮಾಕ್ಕೆ ಅಕ್ಕಿ, ಬೆಲ್ಲ, ಬೇಳೆ, ಅಡಿಗೆ ಎಣ್ಣೆ ಸೇರಿದಂತೆ ಇತ್ಯಾದಿ ದಿನಸಿಗಳು ಹಾಗೂ ತರಕಾರಿಗಳನ್ನು ಕ್ವಿಂಟಲ್ ಗಟ್ಟಲೆ ಕಳಸಿಕೊಂಡು ಬರುವ ರೂಢಿ ಇದೆ. ಕೈವಾರ ಮಠದಲ್ಲಿ ಪ್ರತಿದಿನವೂ ಅನ್ನ ದಾಸೋಹ ನಡೆಯುತ್ತದೆ.
ಆದರೆ, ಗುರು ಪೂರ್ಣಿಮಾ ಸಲುವಾಗಿ ನಡೆಯುವ ಗುರುಪೂಜಾ ಸಂಗೀತೋತ್ಸವಕ್ಕೆ ರಾಷ್ಟ್ರಮಟ್ಟದ ಖ್ಯಾತ ಸಂಗೀತ ಕಲಾವಿದರು ಸೇರಿದಂತೆ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಹಿನ್ನೆಲೆ ಅನ್ನದಾಸೋಹ ನಡೆಸಲು ನಮ್ಮ ಸೇವೆಯನ್ನು ಭಕ್ತಿಯಿಂದ ಮಾಡುತ್ತಿದ್ದೇವೆ ಎಂದರು.
ಭಕ್ತಾದಿಗಳಾದ ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಸಮಾಜ ಸೇವಕ ಪುಸ್ತಿ ನಾರಾಯಣಸ್ವಾಮಿ, ವೆಂಕಟಕೃಷ್ಣಯ್ಯ ಶೆಟ್ಟಿ, ನಿವೃತ್ತ ಡಿವೈಎಸ್ಪಿ ವೆಂಕಟೇಶಸ್ವಾಮಿ, ಮುಖ್ಯೋಪಾಧ್ಯಾಯ ಅಶ್ವಥನಾರಾಯಣ, ಗೋಕುಲ್ ಚಲಪತಿ, ಗಾಂಧಿನಗರ ಸುನಿಲ್, ಕೆ.ವಿ. ಆಂಜಿ, ವಕೀಲರಾದ ಎಲ್.ನಾಗರಾಜ್, ಅಮರನಾಥ್, ನರಸಿಂಹಮೂರ್ತಿ, ಗೋವಿಂದರಾಜು, ಚಂದ್ರಕುಮಾರ್, ಹೂವಿನ ಮಂಡಿ ವರದಪ್ಪ, ಪೂಜಾರಿ ಮಂಜುನಾಥ್, ತಲಗುಂದ ಶ್ರೀನಿವಾಸ್, ನರಸಿಂಹರಾಜು, ಸಾಮಾ ಅನಿಲ್, ಬೆಣ್ಣಂಗೂರು ವೆಂಕಟೇಶ್, ಕಾರು ಮುನಿಯಪ್ಪ ಮತ್ತಿತರರು ಹಾಜರಿದ್ದರು.