ದಲಿತರ/ಶೋಷಿತರ ಹಕ್ಕುಗಳ ರಕ್ಷಣೆಗೆ ಸಿದ್ಧ
ಆನೇಕಲ್. ಜು. ೧೯- ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಸಹ ಇಂದಿಗೂ ದಲಿತರ ಮತ್ತು ಬಡವರ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆಯು ನಡೆಯುತ್ತಿದ್ದು ಇದಕ್ಕೆಲ್ಲಾ ತಿಲಾಂಜಲಿ ಇಡುವ ನಿಟ್ಟಿನಲ್ಲಿ ರಾಜ್ಯದಲ್ಲಿರುವ ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳೆಲ್ಲಾ ಒಟ್ಟುಗೂಡಿ ಹೋರಾಟಕ್ಕೆ ಧುಮಕಬೇಕು ಎಂಬುವ ಉದ್ದೇಶದಿಂದ ರಾಷ್ಠೀಯ ಮೂಲ ನಿವಾಸಿ ಮಹಾ ಒಕ್ಕೂಟವನ್ನು ನೂತನವಾಗಿ ಪ್ರಾರಂಭಿಸಿದ್ದೇವೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ರಾಜ್ಯಾಧ್ಯಕ್ಷ ಪ್ರಜ್ವಲ್ ಜಿಗಣಿ ಶಂಕರ್ ರವರು ತಿಳಿಸಿದರು.
ಅವರು ಪಟ್ಟಣದಲ್ಲಿರುವ ಐಬಿಯಲ್ಲಿ ಬಾರತೀಯ ಬೀಮ ಸೇನೆ ಮತ್ತು ಕರ್ನಾಟಕ ರಿಪಬ್ಲಿಕನ್ ಸೇನೆ ಸಂಘಟನೆ ವತಿಯಿಂದ ಆಯೋಜಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು. ಒಕ್ಕೂಟ ರಚನೆಗೆ ಈಗಾಗಲೇ ಬಾರತೀಯ ಬೀಮ ಸೇನೆ ಮತ್ತು ಕರ್ನಾಟಕ ರಿಪಬ್ಲಿಕನ್ ಸೇನೆಯ ಸಂಘಟನೆಗಳು ಸಮ್ಮತಿ ನೀಡಿದ್ದು ಮುಂದಿನ ದಿನಗಳಲ್ಲಿ ಹಲವು ಸಂಘಟನೆಗಳು ನಮ್ಮ ಜೊತೆಗೆ ಕೈಜೋಡಿಸಲಿದೆ ಎಂದರು.
ಬಾರತೀಯ ಬೀಮ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಎನ್. ಬ್ಯಾಟ್ ರಾಜ್ ರವರು ಮಾತನಾಡಿ ನಾವು ರಾಜಕೀಯ ಅದಿಕಾರ ಪಡೆದಾಗ ಮಾತ್ರ ನಮ್ಮ ಸಮುದಾಯಗಳು ಅಭಿವೃದ್ದಿ ಪಡೆಯಲು ಸಾಧ್ಯವಾಗಿದ್ದು. ಮುಂದಿನ ದಿನಗಳಲ್ಲಿ ನಾವೆಲ್ಲರೂ ರಾಷ್ಠೀಯ ಮೂಲ ನಿವಾಸಿ ಮಹಾ ಒಕ್ಕೂಟದ ಮೂಲಕ ರಾಜಕೀಯ ಪ್ರವೇಶ ಮಾಡಿ ಅದಿಕಾರವನ್ನು ಪಡೆಯುವಂತಹ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ಹೋರಾಟಗಾರರಾದ ಹೊಂಪಲಘಟ್ಟ ರವಿ, ಜಾಲಿ ವೆಂಕಟೇಶ್, ಸಂಪಿಗೆ ನಾಗರಾಜ್, ಬಿ.ಎಂ. ನಾಗೇಶ್, ಬಿಟಿಎಂ ನರಸಿಂಹ, ಮುನಿರಾಜು, ದೊಡ್ಡಹಾಗಡೆ ಯಲ್ಲಪ್ಪ, ಅಣ್ಣಯ್ಯ, ಜಯರಾಮ್, ಲೋಕೇಶ್, ಎಲ್.ಎಂ.ವೆಂಕಟೇಶ್, ಸೋಮಶೇಖರ್ ಮತ್ತು ಬಾರತೀಯ ಬೀಮ ಸೇನೆ ಹಾಗೂ ಕರ್ನಾಟಕ ರಿಪಬ್ಲಿಕನ್ ಸೇನೆಯ ಪದಾದಿಕಾರಿಗಳು ಬಾಗವಹಿಸಿದ್ದರು.