ಕೈವಾರದಲ್ಲಿ ಗುರುಪೂಜಾ ಸಂಗೀತೋತ್ಸವ
ಕೋಲಾರ,ರಿu,೧೯- ಚಿಂತಾಮಣಿ ತಾಲ್ಲೂಕಿನ ಪ್ರಸಿದ್ದ ಯಾತ್ರಸ್ಥಳ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ಮಠದಲ್ಲಿ ಇಂದಿನಿಂದ ಗುರುಪೂಜಾ ಮಹೋತ್ಸವ ಮತ್ತು ರಾಷ್ಟ್ರೀಯ ಮಟ್ಟದ ಸಂಗೀತೋತ್ಸವ ಕಾರ್ಯಕ್ರಮಗಳು ಇಂದಿನಿಂದ (ಶುಕ್ರವಾರ ೧೯.೭.೨೪) ಆರಂಭವಾಗುತ್ತದೆ. ದೇವಾಲಯವನ್ನು ವಿದ್ಯುತ್‌ಗಳಿಂದ ಹಾಗೂ ಹೂಗಳಿಂದ ಅಲಂಕರಿಸಲಾಗಿದೆ.
ಪ್ರಾತ:ಕಾಲ ಘಂಟಾನಾದ, ಸುಪ್ರಭಾತ, ಗೋಪೂಜೆಯೊಂದಿಗೆ ಗುರುಪೂಜೆ-ಸಂಗೀತೋತ್ಸವವು ಪ್ರಾರಂಭವಾಗುತ್ತದೆ. ಬೆಳಿಗ್ಗೆ ೬ ಗಂಟೆಯಿಂದಲೇ ಮುಖ್ಯ ವೇದಿಕೆಯಲ್ಲಿ ಸ್ಥಳೀಯ ನಾದಸ್ವರ ಕಛೇರಿಗಳೊಂದಿಗೆ ಆರಂಭವಾಗುತ್ತದೆ.
ಗುರುಪೂಜಾ ಸಂಗೀತೋತ್ಸವದ ಅಂಗವಾಗಿ ಇಂದಿನಿಂದ ನಿರಂತರ ೭೨ ಗಂಟೆಗಳ ಕಾಲ ದೇಶದ ಹಲವಾರು ವಿದ್ವಾಂಸರುಗಳಿಂದ ಸಂಗೀತ ಸೇವೆ ಸಮರ್ಪಣೆಯಾಗುತ್ತದೆ. ಈ ಸಂಗೀತ ಉತ್ಸವದಲ್ಲಿ ನಾನಾ ಪ್ರಕಾರದ ಸಂಗೀತ ಕಛೇರಿ, ಹರಿಕಥೆ, ಬುರ್ರಕಥೆ, ಭರತನಾಟ್ಯ, ನಾದಸ್ವರ ವಾದನ, ಸ್ಯಾಕ್ಸೊಪೋನ್, ಜಾನಪದ ಗೀತೆ, ತತ್ವಗಾಯನ, ಭಕ್ತಿ ಸಂಗೀತವನ್ನು ಒಂದೇ ವೇದಿಕೆಯಲ್ಲಿ ಸವಿಯುವ ಸದಾವಕಾಶ ಸಂಗೀತ ಪ್ರಿಯರಿಗೆ ಒದಗಿಬಂದಿದೆ.
ಸಂಗೀತ ಸಮಾರಂಭ ನಡೆಯುವ ಶ್ರೀ ಯೋಗಿ ನಾರೇಯಣ ಸಭಾಂಗಣವನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಲಾಗಿದೆ. ಸಭಾಂಗಣದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಸಂಗೀತ ಕಾರ್ಯಕ್ರಮಗಳು ನಡೆಯುವ ವೇದಿಕೆಗೆ ಶ್ರೀ ಅಮರನಾರೇಯಣಸ್ವಾಮಿ ವೇದಿಕೆ ಮತ್ತು ಶ್ರೀ ಭೀಮಲಿಂಗೇಶ್ವರಸ್ವಾಮಿ ವೇದಿಕೆ ಎಂದು ಹೆಸರಿಡಲಾಗಿದೆ. ವೇದಿಕೆಯ ಮುಂಭಾಗದಲ್ಲಿ ಮತ್ತೊಂದು ವೇದಿಕೆಯನ್ನು ನಿರ್ಮಿಸಿ ಸದ್ಗುರು ತಾತಯ್ಯನವರ ಉತ್ಸವಮೂರ್ತಿಯನ್ನು ಇಡಲಾಗುತ್ತದೆ. ಎದುರಿಗೆ ಇರುವ ಗುರುಗಳಿಗೆ ತಮ್ಮ ಸಂಗೀತ ಸೇವೆಯನ್ನು ಸಮರ್ಪಣೆ ಸಂಗೀತಗಾರರು ಮಾಡಲಿದ್ದಾರೆ ಎಂದು ಗುರುಪೂಜಾ ಸಂಗೀತೋತ್ಸವದ ಸಂಯೋಜಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ತಿಳಿಸಿದ್ದಾರೆ.