ಪದವಿ ಪ್ರಮಾಣ ಪತ್ರಗಳಿಂದ ಉದ್ಯೋಗ ಪಡೆಯಲು ಸಾಧ್ಯವಿಲ್ಲ
ಕೋಲಾರ, ಜು.೧೯- ಕೇವಲ ಕಾಲೇಜಿನ ಪದವಿ ಪ್ರಮಾಣ ಪತ್ರಗಳಿಂದ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಬದಲಾಗಿ ವೃತ್ತಿಗೆ ಸಂಬಂಧಿಸಿದ ವಿಶೇಷ ಕೌಶಲ್ಯ ಜ್ಞಾನವಿದ್ದಾಗ ಮಾತ್ರ ಉದ್ಯೋಗ ಲಭಿಸುತ್ತದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಹೇಳಿದರು.
ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯುವ ಕೌಶಲ್ಯ ದಿನಚಾರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪರೀಕ್ಷೆಯಲ್ಲಿ ಎಷ್ಟೇ ಅಂಕಗಳು ಬಂದಿದ್ದರೂ ಕೌಶಲ್ಯ ಜ್ಞಾನದ ಕೊರತೆ ಇದ್ದಾಗ ಜೀವನದಲ್ಲಿ ಯಶಸ್ಸು ಸಿಗಲು ಸಾಧ್ಯವಿಲ್ಲ. ಅದರಲ್ಲೂ ಸ್ವ ಉದ್ಯೋಗ ಮಾಡುವವರು ವೃತ್ತಿಗೆ ಸಂಬಂಧಿಸಿದ ಜ್ಞಾನದ ಜೊತೆಗೆ ಉದ್ಯಮಶೀಲತೆಯ ಗುಣ ಲಕ್ಷಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದರು.
ಕೌಶಲ್ಯಕ್ಕೆ ವಿಶೇಷ ಒತ್ತು ನೀಡುವ ಸಲುವಾಗಿ ವಿಶ್ವ ಸಂಸ್ಥೆ ಪ್ರತಿ ವರ್ಷ ಜುಲೈ.೧೫ ರಂದು ವಿಶ್ವ ಯುವ ಕೌಶಲ್ಯ ದಿನ ಆಚರಿಸುವ ಮೂಲಕ ಅದರ ಮಹತ್ವವನ್ನು ಪ್ರಪಂಚಕ್ಕೆ ಸಾರಿದೆ ಎಂದರು.
ದೇಶದಲ್ಲಿನ ನಿರುದ್ಯೋಗಿಗಳಿಗೆ ಆರ್ಸೆಟಿ ತರಬೇತಿ ಸಂಸ್ಥೆಗಳು ಅಗತ್ಯವಾದ ಕೌಶಲ್ಯ ಗುಣಗಳನ್ನು ಕಲಿಸುವುದರ ಜೊತೆಗೆ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ಅವರ ಬದುಕಿಗೆ ದಾರಿ ದೀಪವಾಗಿವೆ ಎಂದು ಶ್ಲಾಘಿಸಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಬ್ಬ ನಾಯಕ್.ಕೆ ಮಾತನಾಡಿ, ಇಂದಿನ ವ್ಯವಸ್ಥೆಯಲ್ಲಿ ಆಧುನಿಕ ಕಾಲಕ್ಕೆ ತಕ್ಕಂತೆ ವಿಶೇಷವಾದ ಕೌಶಲ್ಯ ಗುಣಗಳನ್ನು ಕಲಿಯದೇ ಹೋದರೆ ಜೀವನ ನಡೆಸುವುದು ಕಷ್ಟಕರ ಎಂದು ಹೇಳಿದರು.
ಸ್ವ ಉದ್ಯೋಗದಲ್ಲಿ ವೇಗವಾಗಿ ಅಭಿವೃದ್ದಿ ಹೊಂದಲು ಹಲವಾರು ಅವಕಾಶಗಳಿವೆ. ಆದರೆ ಅದರಲ್ಲಿ ಯಶಸ್ಸು ಕಾಣಬೇಕಾದರೆ ಕೌಶಲ್ಯ ಜ್ಞಾನ ತುಂಬಾ ಅನಿವಾರ್ಯ ಎಂದರು.
ಕಾರ್ಯಕ್ರಮದಲ್ಲಿ ತರಬೇತುದಾರರಾದ ಕೆ.ವಿ ವಿಜಯ್ ಕುಮಾರ್, ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ, ಸಾವಿತ್ರಿ, ಲೋಕೇಶ್, ಎನ್.ವಿ ನಾರಾಯಣಸ್ವಾಮಿ, ಅರ್ಪಿತ, ವಿಶ್ವನಾಥ್, ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರ್ತಿ ವಿಶಾಲಾಕ್ಷಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.