ಭಾವೈಕ್ಯತೆಗೆ ಸಾಕ್ಷಿಯಾದ ಮೋಹರಂ ಹಬ್ಬ
ಸಂಜೆವಾಣಿ ವಾರ್ತೆ
ಔರಾದ :ಜು.19: ಹಿಂದು-ಮುಸ್ಲಿಂ ಭಾವೈಕ್ಯತೆಯ ಸಾರುವ ಮೋಹರಂ ಹಬ್ಬ ಗುರುವಾರ ತಾಲೂಕಿನ ನಾಗುರ(ಎಂ)ದಲ್ಲಿ ಸಡಗರ ಸಂಭ್ರಮದಿಂದ ನೇರವೇರಿತು.
ಗುರುವಾರ ಮೊಹರಂ ಹಬ್ಬದ ಕೊನೆಯ ದಿನದಂದು ಲಾಲ್ ಸಾಹೇಬ್, ಮೌಲಾಲಿ, ಸಿದ್ದೆಸಾಬ್ ಪೀರ್ ದೇವರುಗಳ ಭವ್ಯವಾದ ಮೇರವಣಿಗೆ ಜರುಗಿತು.
ಇದಕ್ಕೂ ಮುನ್ನ ಮುಂಜಾನೆ ಡೋಲಿ ಪೀರ್ ದೇವರ ಮೇರವಣಿಗೆ ಜರುಗಿತು. ಮೇರವಣಿಗೆಯುದ್ದಕ್ಕೂ ಭಕ್ತರಿಗೆ ಸೇರ್ ಬತ್ , ಚೊಂಗಿ ಖಾಧ್ಯಗಳು ಹಂಚಲಾಯಿತು. ಮದ್ಯಾಹ್ನ 12ರಿಂದ ಗ್ರಾಮದ ದರ್ಗಾ ಆವರಣದಲ್ಲಿ ಗ್ರಾಮದ ಯುವಕರು
ಪೈತ್ರಿ ಪದಗಳು, ಅಲಾಯಿ ಹಾಡುಗಳು, ಭಜನೆ, ಸವಾಲ್ ಜವಾಬ್, ಹುಲಿ ಕುಣಿತ, ಕೋಲಾಟ, ಹಲಗೆ ನೃತ್ಯ, ಮೊಹರಂ ಪದಗಳು, ಕರಡಿ ವೇಷ, ಹಾಸ್ಯ ನಟನೆಗಳಿಗೆ ಹೆಜ್ಜೆ ಹಾಕಿರುವುದು ಎಲ್ಲರ ಗಮನ ಸೆಳೆಯಿತು.
ಮಹಿಳೆಯರು ಆರಾದ್ಯ ದೇವರಿಗೆ ಹರಕೆ ಹೊತ್ತು ಉಡಿತುಂಬ ಅಕ್ಕಿ, ಕಾಯಿ ಕರ್ಪೂರ ಅರ್ಪಿಸಿ ದೇವರಿಗೆ ನಮಸ್ಕರಿಸಿದರು. ನಂತರ ನಾಲ್ಕು ಗಂಟೆಗೆ ಪೀರ್ ಗಳ ಮೇರವಣಿಗೆ ನಡೆಯಿತು. ಗ್ರಾಮದವರಲ್ಲದೇ ಸುತ್ತಮುತ್ತಲಿನ ಭಕ್ತರು ಆಗಮಿಸಿ ತಮ್ಮ ಹರಕೆಗಳನ್ನು ತಿರಿಸಿ ದೇವರ ದರುಶನ ಪಡೆದರು.
ಈ ಸಂದರ್ಭದಲ್ಲಿ ಬಾಬುರಾವ ಶೇರಿಕಾರ್, ಸತೀಷ, ಅವೀನ, ಕವಿರಾಜ್, ಸಾಯಿಕುಮಾರ್, ಪ್ರಭು, ಶಾಬುದ್ದಿನ್, ಸುನೀಲ್, ಬಲಭೀಮ್, ಸುನೀಲ್ ಮಾಲಿಪಾಟೀಲ್, ಸುಭಾಷ ಟೇಲರ್, ಗುರುನ್ನಾಥ, ಅಶೋಕ ಗೌಡಾ, ಸಂಜು ಸಾಗರ್, ಬಸವರಾಜ್ ಮಾನೂರೆ, ಸಂಗಪ್ಪ ಶೇರಿಕಾರ್, ಕುಶಾಲರಾವ್ ಮಾನೂರೆ, ಸಚೀನ್ ಶ್ರೀಮಂಗಲೆ, ಇತರರಿದ್ದರು.
ಸಂತಾನ ಭಾಗ್ಯ ಒದಗಿಸುವ ಪೀರ್
ಹಲವಾರು ವರ್ಷಗಳ ಪ್ರಾಚೀನ ಇತಿಹಾಸವುಳ್ಳ ನಾಗುರ (ಎಂ) ಗ್ರಾಮದ ಪೀರ್ ಗಳು ಭಕ್ತರು ಬೇಡಿದ ವರಗಳನ್ನು ನೀಡುವ ಕಲ್ಪವೃಕ್ಷಗಳಾಗಿ ಹೊರಹೊಮ್ಮಿರುವುದು ಗ್ರಾಮದ ಹೆಗ್ಗಳಿಕೆಯಾಗಿದೆ.
ಪ್ರತಿವರ್ಷ ನೆರೆಯ ಹೈದ್ರಾಬಾದ್, ಪುಣೆ, ಮುಂಬೈ ಸೇರಿದಂತೆ ಇನ್ನಿತರ ಕಡೆಗಳಿಂದ ಮೊಹರಂ ಹಬ್ಬಕ್ಕೆ ಭಕ್ತರು ಆಗಮಿಸಿ ತಮ್ಮ ಹರಕೆಗಳನ್ನು ಹೊತ್ತು, ನಂತರ ಹರಕೆ ತೀರಿದ ನಂತರ ದೇವರ ಸನ್ನಿಧಿಗೆ ಆಗಮಿಸಿ ಕಫ್ಫು ಕಾಣಿಕೆಗಳನ್ನು ನೀಡುವ ವಾಡಿಕೆಯಿದೆ.
ವಿವಾಹವಾಗಿ 10ರಿಂದ 20 ವರ್ಷಗಳಾದರೂ , ಮಕ್ಕಳಾಗದ ದಂಪತಿಗಳು ಈ ದೇವರ ಹತ್ತಿರ ಬಂದು ಹರಕೆ ಹೊತ್ತರೇ ಅನೇಕ ದಂಪತಿಗಳಿಗೆ ಮಕ್ಕಳ ಭಾಗ್ಯ ದೊರೆತ್ತಿರುವ ಉದಾಹರಣೆಗಳಿವೆ. ಆದುದರಿಂದ ಪ್ರತಿವರ್ಷ ಜರುಗುವ ಮೊಹರಂ ಹಬ್ಬಕ್ಕೆ ಇಲ್ಲಿ ಜಾತ್ರೆಯಂತೆ ಭಾಸವಾಗುತ್ತದೆ.
ಹಿಂದುಗಳೇ ಆಚರಿಸುವ ಹಬ್ಬ
ತಾಲೂಕಿನ ನಾಗುರ.ಎಂ ಗ್ರಾಮದಲ್ಲಿ ಕೇವಲ ಒಂದೆ ಒಂದು ಮುಸ್ಲಿಂ ಕುಟುಂಬವಿದೆ. ಇಲ್ಲಿ ಎಲ್ಲ ಹಿಂದುಗಳೇ ದೇವರ ಪ್ರತಿಷ್ಠಾಪನೆ, ಪೂಜೆ, ಪಂಜಗಳ ಮೇರವಣಿಗೆ ಮಾಡುವ ಮೂಲಕ ಮೋಹರಂ ಆಚರಣೆ ಮಾಡುತ್ತಾರೆ,ಹಿಂದೂ ಮುಸ್ಲಿಂ ಭಾವೈಕ್ಯತೆಗೆ ನಾಗುರ ಮೋಹರಂ ಆಚರಣೆ ಸಾಕ್ಷಿಯಾಗಿದೆ.