ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ :ವೈದ್ಯಾಧಿಕಾರಿ ಡಾ.ಗಿರೀಶ ಕುಲಕರ್ಣಿ
ಕೆಂಭಾವಿ :ಜು.19:ರಾಜ್ಯದಾದ್ಯಂತ ದಿನೇ ದಿನೇ ಡೆಂಗ್ಯೂ ಪ್ರಕರಣ ಹೆಚ್ಚುತಿದ್ದು ಮಾರಕ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಜೊತೆ ಸಾರ್ವಜನಿಕರು ಕೈಜೋಡಿಸುವಂತೆ ವೈದ್ಯಾಧಿಕಾರಿ ಡಾ. ಗಿರೀಶ ಕುಲಕರ್ಣಿ ಮನವಿ ಮಾಡಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ವತಿಯಿಂದ ಪಟ್ಟಣದ ಪುರಸಭೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡೆಂಗ್ಯೂ ನಿಯಂತ್ರಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಇದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ. ಸಾರ್ವಜನಿಕರು ತಾವು ವಾಸ ಮಡುವ ಮನೆ, ಸುತ್ತಮುತ್ತಲಿನ ಪರಿಸರ ಸ್ವಚ್ಚತೆ ಕಾಪಾಡಬೇಕು.
ಮನೆಗಳಲ್ಲಿ ನೀರನ್ನು ಸಂಗ್ರಹಿಸಬಾರದು, ಯಾವುದೆ ಕಾರಣಕ್ಕೂ ಮನೆಗಳಲ್ಲಿ ಸೊಳ್ಳೆ ಹರಡದಂತೆ ತೀವ್ರ ನಿಗಾ ವಹಿಸಬೇಕು, ಮಕ್ಕಳು, ವೃದ್ಧರು ದೇಹದ ತುಂಬ ಬಟ್ಟೆ ಧರಿಸಬೇಕು, ಜ್ವರ, ಕೆಮ್ಮು, ನೆಗಡಿ ಬಂದ ತಕ್ಷಣ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಮುಖ್ಯಾಧಿಕಾರಿ ಮಹ್ಮದ್ ಯುಸೂಫ್ ಮಾತನಾಡಿ, ಪಟ್ಟಣದಲ್ಲಿ ಪುರಸಭೆ ವತಿಯಿಂದ ಈಗಾಗಲೆ ಮಾರಕ ಡೆಂಗ್ಯೂ ನಿಯಂತ್ರಣ ಬಗ್ಗೆ ಕ್ರಮ ಕೈಗೊಂಡಿದ್ದು ಫಾಗಿಂಗ್ ಮಾಡಲಾಗಿದೆ. ವಿವಿಧ ವಾರ್ಡಗಳಲ್ಲಿ ಸೋರಿಕೆಯಾಗುತ್ತಿದ್ದ ನಲ್ಲಿ ನೀರನ್ನು ದುರಸ್ತಿಗೊಳಿಸಿ ಶುದ್ಧ ನೀರೊದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ನಂತರ ಭಿತ್ತಿಪತ್ರ ಪತ್ರ ಬಿಡುಗಡೆಗೊಳಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಭಾತ್ ಪೇರಿ ಮೂಲಕ ಜನರಲ್ಲಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಆರೋಗ್ಯ ನಿರೀಕ್ಷ ಮುಜಾಹಿದ ಮುಲ್ಲಾ, ಸಿದ್ರಾಮಯ್ಯ ಇಂಡಿ, ರೇವಣಸಿದ್ದಪ್ಪ, ಸದ್ದಾಂ ಸೇರಿದಂತೆ ಪುರಸಭೆ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು