ಸರ್ಕಾರದ ರೈತ ವಿರೋಧಿ ನೀತಿಗೆ ಖಂಡನೆ
ಸಂಜೆವಾಣಿ ನ್ಯೂಸ್
ಮೈಸೂರು: ಜು.19:- ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ, ರೈತರ ಆತ್ಮಹತ್ಯೆ ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಆಡಳಿತದಲ್ಲಿ ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟ 187 ಕೋಟಿ ಹಣ ದುರುಪಯೋಗ ಹಗರಣದ ಆರೋಪಕ್ಕೆ ಒಳಗಾಗಿದೆ. ಭೂ ಮಾಫಿಯಗಳ ಅಕ್ರಮಗಳು ನಿರಂತರವಾಗಿ ಸಾಗುತ್ತಲೇ ಇವೆ. ರೈತರ ಆತ್ಮಹತ್ಯೆಯೂ ಅಘಾತಕಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2023ರ ಏಪ್ರಿಲ್ ತಿಂಗಳಿಂದ 2024ರ ಜೂನ್ ತಿಂಗಳವರೆಗೆ ರಾಜ್ಯದಲ್ಲಿ 1182 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯುವ ರೈತರ ಆತ್ಮಹತ್ಯೆ ಆತಂಕಕ್ಕೀಡು ಮಾಡಿದೆ. ಆತ್ಮಹತ್ಯೆ ತಡೆಗೆ ರೈತರನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು ಎಂದು ಆಗ್ರಹಿಸಿದರು.
ರೈತರ ಹಕ್ಕೊತ್ತಾಯಗಳು: ರೈತರು ಕೃಷಿ ಪಂಪ್‍ಸೆಟ್‍ಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವತಃ ವೆಚ್ಚ ಭರಿಸಬೇಕೆಂಬ ತೀರ್ಮಾನ ವಾಪಸ್ ಪಡೆಯಬೇಕು. ರಾಜ್ಯ ಸರ್ಕಾರವೇ ಕೃಷಿ ಉತ್ಪನ್ನಗಳಿಗೆ ಎಂಎಸ್‍ಪಿ ನಿಗದಿ ಮಾಡಿ ಖರೀದಿಸಬೇಕು. ಬ್ಯಾಂಕುಗಳ ಸಾಲ ಬಾಕಿ ವಸೂಲಿಗಾಗಿ ರೈತರಿಗೆ ಕಿರುಕುಳ ನೀಡುತ್ತಿರುವುದನ್ನು ತಪ್ಪಿಸಬೇಕು. ಎಲ್ಲಾ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲುಭೀಮಾ ಯೋಜನೆ ವಿಸ್ತರಿಸಿ ಗ್ರಾಮ ಮಟ್ಟದಲ್ಲಿ ಬೆಳೆ ಹಾನಿ ನಿರ್ಧರಿಸಬೇಕು. ವಿಮಾ ಕಂಪನಿಗಳು ಉಳಿಸಿಕೊಂಡಿರುವ ಬಾಕಿಯನ್ನು ಕೂಡಲೇ ವಿತರಿಸಬೇಕು. ಫಸಲು ಪಹಣಿ ದುರಸ್ತಿ, ಪಕ್ಕಾಪೆÇೀಡು ಹದ್ದುಬಸ್ತು ಶುಲ್ಕ ದುಬಾರಿಯಾಗಿದ್ದು, ಇಳಿಸಬೇಕು. ಖರೀದಿ ಕೇಂದ್ರದಿಂದ ಖರೀದಿಸಲಾದ ಉತ್ಪನ್ನಗಳಿಗೆ ಕೂಡಲೇ ಹಣ ಕೊಡಬೇಕು. ಬರ ಪರಿಹಾರ, ವಿಮಾ ಪರಿಹಾರದ ಹಣವನ್ನು ಸಾಲಕ್ಕೆ ಜಮಾ ಮಾಡದಂತೆ ಬ್ಯಾಂಕ್‍ಗಳಿಗೆ ಸೂಚನೆ ನೀಡಬೇಕು.
ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖಾ ಕಿರುಕುಳವನ್ನು ತ ಪ್ಪಿಸಿ ಎಲ್ಲಾ ರೈತರಿಗೂ ಪಟ್ಟಾ ನೀಡಬೇಕು. ಕಾಡು ಪ್ರಾಣಿಗಳಿಂದ ಬೆಳೆ ನಷ್ಟಕ್ಕೆ ವೈಜ್ಞಾನಿಕ ನಷ್ಟ ನಿಗದಿಪಡಿಸಬೇಕು. ರೈತರ ಜಮೀನಿನಲ್ಲಿ ಸಾಗುವನಿ ಮರ ಕಡಿತ ಮತ್ತು ಸಾಗಾಣಿಕೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕು.
ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ಟನ್ ಒಂದಕ್ಕೆ 150 ರೂ. ಪಾವತಿಸಬೇಕೆಂದು ಹಿಂದಿನ ಸರ್ಕಾರ ತೀರ್ಮಾನಿಸಿದ್ದು, ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ರೈತರ ಖಾತೆಗೆ ಹಣ ಜಮೆ ಮಾಡಬೇಕು. ಎಸ್‍ಎಪಿ ಘೋಷಿಸಬೇಕು. ಭೂ ಸುಧಾರಣಾ ತಿದ್ದುಪಡಿ ಕಾಯಿದೆ, ಗೋ ಹತ್ಯೆ ನಿಷೇಧ ಕಾಯಿದೆಯನ್ನು ಕೂಡಲೇ ಹಿಂಪಡೆಯಬೇಕು. ಕಂದಾಯ ಬೀಳು, ಕ್ರಯದ ಬೀಳು ರೇಷ್ಟೋರ್‍ಗೆ ಅವಕಾಶ ಕಲ್ಪಿಸಬೇಕು. ಕೆಆರ್‍ಎಸ್ ಬಳಿ ಟ್ರಯಲ್ ಬ್ಲಾಸ್ಟ್ ಮಾಡಬಾರದು. ಜಲಾಶಯದ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಬೇಕು. ಮುಡಾ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ನಿಷ್ಪಕ್ಷವಾಗಿ ಕ್ರಮ ಕೈಗೊಳ್ಳಬೇಕು. ಕಾವೇರಿ ಜಲಾಯದಲ್ಲಿ ನೀರಿನ ಶೇಖರಣೆ ಕಡಿಮೆ ಇರುವುದರಿಂದ ತಮಿಳುನಾಡಿಗೆ ನೀರು ಹರಿಸಬಾರದು. ಮೈಸೂರು ತಾಲೂಕು ಕೋಚನಹಳ್ಳಿ ರೈತರಿಗೆ ಮೋಸ ಮಾಡಿರುವ ಭೂ ಮಾಫಿಯ ಕುಳಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಪ್ರಸನ್ನ ಎನ್.ಗೌಡ, ಪಿ.ಮರಂಕಯ್ಯ ಮುಂತಾದವರಿದ್ದರು.