ಗಾಣಿಗ ಮಂಗಲ: ಪಿಂಚಣಿ ಅದಾಲತ್ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಹನೂರು ಜು 19 :- ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಣಿಗ ಮಂಗಲ ಗ್ರಾಮದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಅರ್ಹ ಫಲಾನುಭವಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲೂಕು ಗ್ರೇಡ್-2 ತಹಶೀಲ್ದಾರ್ ಡಾII ಕೆ. ಧನಂಜಯ್ ಅವರು ತಿಳಿಸಿದ್ದಾರೆ.
ಹನೂರು ತಾಲೂಕು ಕಸಬಾ ಹೋಬಳಿ ಶಾಗ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಣಿಗಮಂಗಲ ಗ್ರಾಮದ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ದಿನಾಂಕ 20-07-2024 ರಂದು ಬೆಳಗ್ಗೆ 11:30ಕ್ಕೆ “ಪಿಂಚಣಿ ಅದಾಲತ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಾಮಾಜಿಕ ಭದ್ರತೆ ಯೋಜನೆಯ ಪಿಂಚಣಿಗಳಾದ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಯಾಪ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಮತ್ತು ಮೈತ್ರಿ ಪಿಂಚಣಿಗಳಿಗೆ ಸಂಬಂಧಿಸಿದಂತೆ ಅರ್ಹ ಅರ್ಜಿದಾರರಿಗೆ ಪಿಂಚಣಿ ಮಂಜೂರು ಮಾಡುವ ಸಲುವಾಗಿ ಪಿಂಚಣಿ ಅದಾಲತ್ ಕಾರ್ಯಕ್ರಮವು ನಡೆಯಲಿದೆ.
ಪಿಂಚಣಿ ಅದಾಲತ್ ಕಾರ್ಯಕ್ರಮಕ್ಕೆ ಬರುವ ಅರ್ಹ ಫಲಾನುಭವಿಗಳು ಸಾರ್ವಜನಿಕರು ಸರಿಯಾದ ಮೂಲ ದಾಖಲಾತಿಗಳನ್ನು ನೀಡಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಾಲೂಕು ಗ್ರೇಡ್-2 ತಹಶೀಲ್ದಾರ್ ಡಾII ಕೆ. ಧನಂಜಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.