ಅನಧಿಕೃತ ದ್ವಿಚಕ್ರವಾಹನ ಟ್ಯಾಕ್ಸಿ ರದ್ಧುಪಡಿಸಲು ಆಗ್ರಹಿಸಿ ಮನವಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೯: ಕರ್ನಾಟಕ ಚಾಲಕರ ಒಕ್ಕೂಟ ದಾವಣಗೆರೆ ಘಟಕದ ವತಿಯಿಂದ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಹಾಗೂ ಅನಧಿಕೃತ ದ್ವಿಚಕ್ರವಾಹನ ಟ್ಯಾಕ್ಸಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಈ ವಿಚಾರವಾಗಿ ಹಲವಾರು ಬಾರಿ ಕರ್ನಾಟಕ ಚಾಲಕರ ಒಕ್ಕೂಟವು ಹೋರಾಟ ಮಾಡಿದರೂ ಇಂದಿನವರೆಗೂ ಯಾವುದೇ ಸರ್ಕಾರಗಳು ಅಧಿಕಾರದಲ್ಲಿದ್ದರೂ ಕಾರ್ಯೋನ್ಮುಖವಾಗಿಲ್ಲ. ಆದ್ದರಿಂದ ಕರ್ನಾಟಕ ಚಾಲಕರ ಒಕ್ಕೂಟ ದಾವಣಗೆರೆ ಘಟಕವು ಈ ವಿಚಾರದಲ್ಲಿ ಸರ್ಕಾರದ ಗಮನಸೆಳೆಯುವ ಹಾಗೂ ಎಚ್ಚರಿಸುವ ನಿಟ್ಟಿನಲ್ಲಿ ನಿರಂತರ ಪತ್ರ ಚಳುವಳಿ ಎಂಬ ಹೋರಾಟವನ್ನು ಪ್ರಾರಂಭಿಸುತ್ತಿದ್ದು, ಇನ್ನು ಮುಂದೆ ನಿರಂತರವಾಗಿ ಸರ್ಕಾರಕ್ಕೆ ಸಂಸದರುಗಳಿಂದ, ಶಾಸಕರುಗಳಿಂದ, ಸಚಿವರುಗಳಿಂದ, ಮಹಾನಗರ ಪಾಲಿಕೆ ಸದಸ್ಯರುಗಳಿಂದ, ವಿವಿಧ ಕನ್ನಡಪರ, ದಲಿತಪರ ಇನ್ನು ಹಲವಾರು ಸಂಘಟನೆಗಳಿಂದ, ಗಣ್ಯವ್ಯಕ್ತಿಗಳಿಂದ, ಸಂಘ ಸಂಸ್ಥೆಗಳಿಂದ ನಿರಂತರ ಸರ್ಕಾರಕ್ಕೆ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಪತ್ರ ಬರೆಸುವ ಚಳುವಳಿಯನ್ನು ಬೇಡಿಕೆ ಈಡೇರುವವರೆಗೂ ಹಮ್ಮಿಕೊಳ್ಳಲಾಗಿದೆ ಎಂದು ಘಟಕದ ಜಿಲ್ಲಾಧ್ಯಕ್ಷ ಪಿ.ಬಿ. ಅಂಜುಕುಮಾರ್ ಹೇಳಿದರು.ಆದ್ದರಿಂದ ಸರ್ಕಾರ ಹಾಗೂ ಸಂಬಂಧಪಟ್ಟವರು ಶೀಘ್ರವೇ ಚಾಲಕರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ದೇಶದ ಹಾಗೂ ರಾಜ್ಯದ ಪ್ರಗತಿಗೆ ಪರೋಕ್ಷವಾಗಿ ಕಾರಣರಾಗಿರುವ ಚಾಲಕರ ಬದುಕನ್ನು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯ ಮಾಡಬೇಕೆಂದು ಹಾಗೂ ಆಟೋ ಮತ್ತು ಕ್ಯಾಬ್ ಚಾಲಕರುಗಳಿಗೆ ಮಾರಕವಾಗಿರುವ ದ್ವಿಚಕ್ರ ವಾಹನ ಟ್ಯಾಕ್ಸಿಯನ್ನು ಈ ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ಅರವಿಂದಾಕ್ಷ ಡಿ.. , ಜಿಲ್ಲಾ ಕಾರ್ಯಾಧ್ಯಕ್ಷರಾದ ಜಯರಾಂ ಎ., ಜಿಲ್ಲಾ ಸಂಚಾಲಕರಾದ ಇಮ್ರಾನ್ ಭಾಷಾ ಹಾಗೂ ಪದಾಧಿಕಾರಿಗಳಾದ ಮೈನು, ಕರೀಂಖಾನ್, ತಿಪ್ಪೇಸ್ವಾಮಿ ಸಿ., ದಾ.ಹ. ಶಿವಕುಮಾರ್, ಐಗೂರು ಪ್ರಕಾಶ್, ಮಾರುತಿ ತಳವಾರ, ಗುರುರಾಜ್ ಎನ್.. ಅಣ್ಣಯ್ಯ ಜಿ., ಲೋಹಿತ್ ಕುಮಾರ್ ಎ., ಬಸವರಾಜ್ ಎಂ. ಹಾಗೂ ಇನ್ನು ಅನೇಕ ಕರ್ನಾಟಕ ಚಾಲಕರ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.