ಗ್ರಾಮೀಣ ಸಹಕಾರ ಸಂಘಗಳ ನಿರ್ಮಾಣ ಮಹಾತ್ಮಾ ಗಾಂಧೀಜಿ ಕನಸು
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೯; ಮಹಾತ್ಮ ಗಾಂಧೀಜಿಯವರು ದೇಶದ ಪ್ರತಿ ಹಳ್ಳಿಗಳಲ್ಲಿ ಸಹಕಾರಿ ಸಂಘ, ಶಾಲೆ, ಅಂಗನವಾಡಿ ಇರಬೇಕು ಎಂಬು ಕನಸು ಕಂಡಿದ್ದರು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ಎಂ.ದ್ಯಾಮಣ್ಣ ಹೇಳಿದರು.ನಗರದ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ  ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಸಹಕಾರ ವಿಷಯದ ಕುರಿತು  ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಪ್ರಬಂಧ ಸ್ಪರ್ಧೆ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಚರ್ಚಾಸ್ಪರ್ಧೆ ಕಾರ್ಯಕ್ರಮದ ಅಧ್ಯಕತೆ ವಹಿಸಿ ಅವರು ಮಾತನಾಡಿದರು.  ಮಹಾತ್ಮ ಗಾಂಧೀಜಿಯವರ ಆಶಯದಂತೆ ಸಹಕಾರ ಸಂಘ ಮತ್ತು ಸಹಕಾರಿ ಬ್ಯಾಂಕು ರೈತರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ಸಾಲ ನೀಡುವುದರ ಜೊತೆಗೆ ಅಭಿವೃದ್ದಿಗೂ ಕೊಡುಗೆ ನೀಡುತ್ತಿವೆ. ಸಮಾಜದ ದುರ್ಬಲ ವರ್ಗದವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಬೇಕು. ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ.  ಇಂದಿನ ಮಕ್ಕಳೇ, ಮುಂದಿನ ಪ್ರಜೆಗಳು ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಬೇಕು, ಜಾತ್ಯಾತೀತವಾಗಿ ಪ್ರತಿಯೊಬ್ಬರು ಉತ್ತಮ ಪ್ರಜೆಗಳಾಗಬೇಕೆಂದರೆ ಶಿಕ್ಷಣ ಬಹಳ ಮುಖ್ಯ. ವಿದ್ಯಾರ್ಥಿ ದೆಸೆಯಲ್ಲಿಯೇ ಸಹಕಾರದ ಬಗ್ಗೆ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.