ಪ್ರವಾಹದ ಭೀತಿ ಮೂಡಿಸಿದ ತುಂಗಾ ನದಿ : ತುಂಗಾ ಡ್ಯಾಂಗೆ ಹೆಚ್ಚುತ್ತಿರುವ ಒಳಹರಿವು!
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಜು. 18: ನಾಡಿನ ಜೀವ ನದಿಗಳಲ್ಲೊಂದಾದ ತುಂಗಾ ನದಿ ಪ್ರಸ್ತುತ ಮೈದುಂಬಿ ಹರಿಯುತ್ತಿದೆ. ಜೊತೆಗೆ ಪ್ರವಾಹದ ಭೀತಿ ಸೃಷ್ಟಿಸಿದೆ. ಕೆಲವೆಡೆ ನದಿಪಾತ್ರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.ಈ ನಡುವೆ ತೀರ್ಥಹಳ್ಳಿ, ಆಗುಂಬೆ, ಶೃಂಗೇರಿ ಸುತ್ತಮುತ್ತ ಭಾರೀ ಮಳೆ ಮುಂದುವರಿದಿದೆ. ಇದರಿಂದ ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯದ ಒಳಹರಿವಿನಲ್ಲಿ ನಿರಂತರ ಹೆಚ್ಚಳ ಕಂಡುಬರಲಾರಂಭಿಸಿದೆ.ಗುರುವಾರ ಬೆಳಿಗ್ಗೆಯ ಮಾಹಿತಿಯಂತೆ ತುಂಗಾ ಜಲಾಶಯಕ್ಕೆ 71,484 ಕ್ಯೂಸೆಕ್ ಒಳಹರಿವಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ಹೊಸಪೇಟೆಯ ಟಿಬಿ ಡ್ಯಾಂಗೆ ಹೊರ ಹರಿಸಲಾಗುತ್ತಿದೆ.ಡ್ಯಾಂನಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಕಳೆದ ಮೂರು ದಿನಗಳಿಂದ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಡ್ಯಾಂನಿಂದ ಬಿಡುವ ನೀರಿನಲ್ಲಿ ಹೆಚ್ಚಳವಾದರೆ, ನಗರದ ನದಿಯಂಚಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ.ಈಗಾಗಲೇ ಮಹಾನಗರ ಪಾಲಿಕೆ ಆಡಳಿತವು ನದಿ ನೀರು ನುಗ್ಗಬಹುದಾದ ತಗ್ಗು ಪ್ರದೇಶಗಳ ನಿವಾಸಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಜೊತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.