ಜು.೨೮ ಕ್ಕೆ ಬೆಣ್ಣೆನಗರಿ ಸಾಹಿತ್ಯ ಸಂಭ್ರಮ-2024′
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೮; ರಾಜ್ಯ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ ಚಿತ್ರದುರ್ಗ, ಜಿಲ್ಲಾ ಕರುನಾಡ ಹಣತೆ ಕವಿ ಬಳಗದ ವತಿಯಿಂದ ಜುಲೈ 28 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ‘ಬೆಣ್ಣೆನಗರಿ ಸಾಹಿತ್ಯ ಸಂಭ್ರಮ-2024’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಳಿಚೋಡು ಹೋಬಳಿ ಕಸಾಪ ಘಟಕದ ಅಧ್ಯಕ್ಷ ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ದಾವಣಗೆರೆ ಜಿಲ್ಲಾ ಘಟಕದ ಉದ್ಘಾಟನೆ, ಜಿಲ್ಲಾ ಸಮ್ಮೇಳನ, ಪುಸ್ತಕ ಲೋಕಾರ್ಪಣೆ, ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ 150 ಕವಿಗಳಿಂದ ಸ್ಥಳದಲ್ಲೇ ದಾಖಲೆ ಬರಹ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಸಮ್ಮೇಳನವನ್ನು ವೈಚಾರಿಕ ಚಿಂತಕ ಡಾ. ಗಂಗಾಧರ್ ವ.ಮ. ಆತ್ರೇಯ ಸಾಗರ ಉದ್ಘಾಟಿಸಲಿದ್ದು, ಸಾಹಿತಿ ಡಾ. ಶ್ರೀದೇವಿ ಸೂರ್ಯ ಸುವರ್ಣಖಂಡಿ ಸಮ್ಮೇಳನಾಧ್ಯಕ್ಷರಾಗಿ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಭಾರತೀಯ ಸಂಸ್ಕೃತಿ ಪ್ರತಿಪಾದಕರಾದ ಮಹೇಂದ್ರ ಮುನೋತ್, ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಸಾಹಿತಿ ಎನ್.ಟಿ. ಎರ್ರಿಸ್ವಾಮಿ, ಇನ್ನಿತರ ಗಣ್ಯರು ಉಪಸ್ಥಿತರಿರುವರು.ಇದೇ ವೇಳೆ ಸಾಹಿತಿ ಎಸ್.ವಿ. ಶಾಂತಕುಮಾರ್ ಅವರ ಕನಸು ಚಿಗುರೊಡೆಯಿತು ಕೃತಿಯನ್ನು ಸಾಹಿತಿ ಕೆ. ಶಾಂತ ಬಸವರಾಜ್ ಬಿಡುಗಡೆ ಮಾಡಲಿದ್ದಾರೆ. ಹಾಗೂ ಸಾಹಿತಿ ಡಾ. ಶ್ರೀದೇವಿ ಸೂರ್ಯ ಸುವರ್ಣಖಂಡಿ ಅವರು ಶ್ರಾವ್ಯ ಕೃತಿಯನ್ನು ಕೂಡ ಬಿಡುಗಡೆ ಮಾಡಲಿದ್ದಾರೆ ಎಂದರು.