ರೈತರಿಗೆ ವಂಚನೆ:ಕಾನೂನು ಕ್ರಮಕ್ಕೆ ಆಗ್ರಹ
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಸೆ.28: ರೈತರ ಹೆಸರಿನಲ್ಲಿ ಸಾಲ ಪಡೆದು ರೈತರಿಗೆ ನೀಡದೇ ವಂಚನೆ ಮಾಡಿರುವ ತಾಲೂಕಿನ ತೌಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಸಮಿತಿ ಮುಖಂಡರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಹಾಗೂ ತಾಲೂಕು ಸಹಕಾರ ಇಲಾಖೆಯ ನಿಬಂಧಕರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು ತೌಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪರಮೇಶ್ವರಪ್ಪ ಹಾಗೂ ಆಡಳಿತ ಮಂಡಳಿ ಸುಮಾರು ವರ್ಷಗಳಿಂದ ನೂರಾರು ರೈತರಿಗೆ ಸಾಲ ನೀಡುತ್ತೇವೆ ಪಹಣಿ ಹಾಗೂ ಇತರೆ ದಾಖಲಾತಿ ಪಡೆದುಕೊಂಡು ಖಾಲಿ ಚೆಕ್ ಹಾಗೂ ಸಂಬಂಧಿಸಿದ ದಾಖಲೆಗಳಿಗೆ ಸಹಿ ಮಾಡಿಸಿಕೊಂಡು ಅಲ್ಪ-ಸ್ವಲ್ಪ ಸಾಲದ ಹಣ ನೀಡಿ ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ರೈತರ ಹೆಸರಿನಲ್ಲಿ ಹೆಚ್ಚುವರಿ ಸಾಲ ಮಂಜೂರು ಮಾಡಿಸಿಕೊಂಡು ರೈತರ ಗಮನಕ್ಕೆ ತರದೇ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಮರಣ ಹೊಂದಿದ ರೈತರ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಾಲ ಮಂಜೂರು ಮಾಡಿಕೊಂಡು ಹಣ ದೋಚಿದ್ದಾರೆ, ಅಲ್ಲದೇ ಮಹಿಳಾ ಸ್ವ ಸಹಾಯ ಸಂಘಗಳ ಉಳಿತಾಯದ ಹಣ ಹಾಗೂ ಸಣ್ಣ ವ್ಯಾಪಾರಸ್ಥರ ಇಟ್ಟ ಠೇವಣಿ ಹಣವನ್ನು ಬ್ಯಾಂಕಿಗೆ ಕಟ್ಟದೇ ಕೋಟಿ ಕೋಟಿ ಹಣ ತೆಗೆದುಕೊಂಡು ಸಂಘದ ಮುಖ್ಯಾಧಿಕಾರಿ ಪರಮೇಶ್ವರಪ್ಪ ಪರಾರಿಗಿದ್ದಾರೆ ಎಂದು ದೂರಿದರು.
ಇತ್ತೀಚಿಗೆ ಸಹಕಾರ ಸಂಘದಿಂದ ರೈತರಿಗೆ ಹಿಂದೆ ಪಡೆದ ಸಾಲ ಕಟ್ಟಬೇಕೆಂದು  ನೋಟೀಸ್ ಕಳಿಸಿರುತ್ತಾರೆ, ಸಾಲ ಪಡೆದಿರುವ ಬಗ್ಗೆ ಪಹಣಿಗಳಲ್ಲಿ ನಮೂದಾಗಿರುತ್ತದೆ ಇದನ್ನು ಕಂಡು ರೈತರು ಆತಂಕಕ್ಕೆ ಒಳಗಾಗಿದ್ದಾರೆ ಹಾಗಾಗಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ರೈತರ ಸಾಲದ ಹಣವನ್ನು ವಾಪಸ್ಸು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗುಡಿಹಳ್ಳಿ ಹಾಲೇಶ್, ರಾಗಿಮಸಲವಾಡ ಹನುಮಂತಪ್ಪ, ಪ್ರಭುಗೌಡ, ಹೆಚ್.ಹನುಮಂತಪ್ಪ, ಎ.ಎಂ.ಶಿವಯೋಗಯ್ಯ, ಪಿ.ಕೊಟ್ರೇಶ್, ಪಿ.ಪ್ರಕಾಶ್, ಪಿ.ಸಿದ್ದನಗೌಡ, ಶಂಭುಲಿಂಗನಗೌಡ, ಎಂ.ಹೆಗ್ಗಪ್ಪ, ವೈ.ಕೊಟ್ರೇಶ್, ಆನಂದಗೌಡ, ಮೈಲಪ್ಪ, ಚೌಡಪ್ಪ, ನಾಗರಾಜ ಸೇರಿದಂತೆ ಇತರರು ಇದ್ದರು.