ಸ್ವಚ್ಛತಾ ಕಾರ್ಯ ನಿತ್ಯ ನಡೆಯುವಂತಾಗಲಿ : ಎಸ್‌ಐ ಕುಬೇರಪ್ಪ ಕರೆ
ಸಂಜೆವಾಣಿ ವಾರ್ತೆ
ದಾವಣಗೆರೆ, ಸೆ. 28; ಸ್ವಚ್ಛತಾ ಕಾರ್ಯಕ್ರಮ ಎಂಬುದು ಕೇವಲ ಒಂದು ದಿನಕ್ಕೆ ಮೀಸಲಾಗಿರಬಾರದು. ಇದು ನಿತ್ಯ ನಡೆಯುವ ಕಾರ್ಯವಾಗಬೇಕಿದೆ. ನಮ್ಮ ಮನೆ, ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿದ್ದರೆ, ಯಾವುದೇ ರೀತಿಯ ರೋಗಗಳು ಹರಡುವುದಿಲ್ಲ ಎಂದು ರೈಲ್ವೆ ಪೊಲೀಸ್ ಠಾಣೆಯ (ಆರ್‌ಪಿಎಫ್)ಸಬ್ ಇನ್ಸ್ಪೆಕ್ಟರ್ ಬಿ.ಎನ್. ಕುಬೇರಪ್ಪ ಹೇಳಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ರೈಲ್ವೆ ಪೊಲೀಸ್ ಇಲಾಖೆ, ಚಾಣಕ್ಯ ಪದವಿ ಪೂರ್ವ ಕಾಲೇಜು, ಹಾಗೂ ಪ್ರಥಮ ದರ್ಜೆ ವಾಣಿಜ್ಯ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕದ ಸಹಯೋಗದಲ್ಲಿ ಸ್ವಚ್ಚತಾ ಹೀ ಸೇವಾ ಅಭಿಯಾನದಡಿ ಸ್ವಭಾವ್ ಸ್ವಚ್ಛತಾ ಸಂಸ್ಕಾರ್ ಎಂಬ ಧ್ಯೆಯದೊಂದಿಗೆ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ನಮ್ಮ ಮನೆ, ರಸ್ತೆ, ಸುತ್ತಮುತ್ತಲ ಪ್ರದೇಶಗಳಲ್ಲಿ ಗಿಡ ಮರಗಳನ್ನು ಬೆಳೆಸುವುದರಿಂದ ಉತ್ತಮ ಆಮ್ಲಜನಕ, ಉತ್ತಮ ಆರೋಗ್ಯ ಪಡೆಯಬಹುದು ಎಂದರು. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎಂಬAತೆ ಸ್ವಚ್ಛತೆ ಎಂಬುದು ಮೊದಲು ನಮ್ಮ ಮನೆಯಿಂದಲೇ ಆರಂಭವಾಗಬೇಕು. ನಿಮ್ಮ ನಿತ್ಯದ ಕಾರ್ಯಗಳ ಜೊತೆಗೆ ಈ ಸ್ವಚ್ಛತಾ ಕಾರ್ಯವನ್ನು ರೂಢಿಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲ ಪ್ರದೇಶ, ರಸ್ತೆ, ನಮ್ಮ ಶಾಲೆ, ನಮ್ಮ ಕಾಲೇಜು, ನಮ್ಮ ಕಚೇರಿ ಸೇರಿದಂತೆ ಸ್ವಚ್ಛವಾಗಿದ್ದರೆ ಉತ್ತಮ ಪರಿಸರವನ್ನು ಪಡೆಯಲು ಸಾಧ್ಯ. ನಿತ್ಯವೂ ಸಹಾ ನೀವುಗಳು ನಿಮ್ಮ ಮನೆ ಸ್ವಚ್ಛತೆ ಜೊತೆಗೆ ನಿಮ್ಮ ಸಮೀಪದ ಶಾಲೆ ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಕೈಜೋಡಿಸಬೇಕು ಎಂದರು. ರೈಲ್ವೆ ಇಲಾಖೆಯ ಮುಖ್ಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ ಮಾತನಾಡಿ, ಸ್ವಭಾವ ಸ್ವಚ್ಛತಾ, ಸಂಸ್ಕಾರ ಸ್ವಚ್ಛತಾ ಎಂದರೆ ನಮ್ಮ ಸ್ವಭಾವ ಯಾವ ರೀತಿ ಸ್ವಚ್ಛತೆ ಕಡೆಗೆ ಗಮನಹರಿಸುತ್ತದೆಯೋ ಅದೇ ರೀತಿ ನಮ್ಮ ಸಂಸ್ಕಾರ ಅದೇ ರೀತಿ ಮುಂದುವರೆಸಿಕೊAಡು ಹೋಗುತ್ತದೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನೀವು ನಿಮ್ಮ ಮನೆ, ನಿಮ್ಮ ಅಕ್ಕಪಕ್ಕದವರು ಸಹಾ ಮನೆ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡರೆ ನಮ್ಮ ಊರು, ನಮ್ಮ ಜಿಲ್ಲೆ, ನಮ್ಮ ರಾಜ್ಯ ಎಲ್ಲವೂ ಸ್ವಚ್ಛವಾಗಿರಲು ಸಾಧ್ಯ. ಈ ಹಿನ್ನಲೆಯಲ್ಲಿಂದು ಈ ರೈಲ್ವೆ ನಿಲ್ದಾಣದಲ್ಲಿ ಯುವ ಜನತೆಗೆ ಶಾಲಾ ಕಾಲೇಜು ಮಟ್ಟದಲ್ಲಿಯೇ ಜಾಗೃತಿ ಮೂಡಿಸುವ ಸಲುವಾಗಿ ಈ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಅವರು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಗಾಂಧೀಜಿಯವರು ಕಂಡ ಕನಸಿನಂತೆ ಸ್ವಚ್ಛ ಭಾರತವಾಗಲು ಸಾಧ್ಯ ಎಂದರು ತಿಳಿಸಿದರು.ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಕೊಂಡರೆಡ್ಡಿ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಲಕ್ಷ್ಮೀ ಆರ್.ಪಾಟೀಲ, ಚಾಣಕ್ಯ ಕಾಲೇಜಿನ ಪ್ರಾಚಾರ್ಯ ಬಿಆರ್‌ಟಿ ಸ್ವಾಮಿ, ಡಾನ್ ಬಾಸ್ಕೋ ಶಾಲೆಯ ಶ್ರೀನಿವಾಸ, ಇತರೆ ಅಧಿಕಾರಿಗಳು, ಉಪನ್ಯಾಸಕ ರವಿಕುಮಾರ, ವಿದ್ಯಾರ್ಥಿಗಳು, ಸಿಬ್ಬಂದಿ ಇತರರು ಇದ್ದರು.