ಅ.೧-೨ ರಂದು ಸಸ್ಯಸಂತೆ- ಸಾವಯವ ಪರಿಕರಗಳ ಮಾರಾಟ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೮: ಐಸಿಎಂಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ ಹಾಗೂ  ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ ೧ ಮತ್ತು ೨ ರಂದು ಕೃಷಿಕರ ಸಮೃದ್ಧಿಗಾಗಿ “ಸಸ್ಯ ಸಂತೆ ಮತ್ತು ಸಾವಯವ ಪರಿಕರಗಳ ಮಾರಾಟ” ಕಾರ್ಯಕ್ರಮವನ್ನು ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಎನ್.ಟಿ ದೇವರಾಜ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ನಗರದಲ್ಲಿ ಪ್ರಪಥಮ ಬಾರಿಗೆ “ಸಸ್ಯ ಸಂಜೆ, ವಸ್ತು ಪ್ರದರ್ಶನ ಮತ್ತು ಸಾವಯದ ಪರಿಕರಗಳ” ಮಾರಾಟವನ್ನು ಆಯೋಜಿಸುತ್ತಿದ್ದು ಜಿಲ್ಲೆಯ ರೈತರಿಗೆ ಮತ್ತು ನಗರದ ನಾಗರೀಕರಿಗೆ ಹೆಚ್ಚು ಅನುಕೂಲವಾಗಲಿದೆ. ಸಸ್ಯ ಸಂತೆಯ ಪ್ರಮುಖ ಆಕರ್ಷಣೆಗಳೆಂದರೆ ಉತ್ತಮ ಗುಣಮಟ್ಟದ 50 ಕ್ಕೂ ಹೆಚ್ಚು ಹಣ್ಣಿನ ಗಿಡಗಳ ಮಾರಾಟ, ದೇಸಿ ಬೀಜಗಳ ಪ್ರದರ್ಶನ ಮತ್ತು ಮಾರಾಟ, ಕೈತೋಟ ಮತ್ತು ತಾರಸಿ ತೋಟಗಳಿಗೆ ಬೇಕಾಗುವ ಸಲಕರಣೆಗಳು, ಸಾವಯವ ಪರಿಕರ ಗೊಬ್ಬರಗಳ ಮಾರಾಟ, ಸಿರಿಧಾನ್ಯಗಳ ಉಪ ಉತ್ಪನ್ನಗಳು, ಸಾವಯವ ಆಹಾರ ಪದಾರ್ಥಗಳ ಮಾರಾಟ ಹೀಗೆ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ ಎಂದರು.ಸಸ್ಯ ಸಂತೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ಅ.೧ ರಂದು  ಮಧ್ಯಾಹ್ನ 2.00 ಗಂಟೆಗೆ  ಚಾಲನೆ ನೀಡಲಿದ್ದಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿಯ ವತಿಯಿಂದ ಬೆಂಗಳೂರಿನ ಐಸಿಎಆರ್-ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ವಿ. ವೆಂಕಟಸುಬ್ರಮಣ್ಯಂ ರವರು ಸಾವಯವ ಪರಿಕರಗಳ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ “ಆಡಿಕೆ ಬೆಳೆಯಲ್ಲಿ ಅಂತರ ಬೆಳೆಗಳು ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸಾವಯವ ಪದ್ಧತಿ ಅಳವಡಿಕೆ” ಕುರಿತು ಕಾರ್ಯಗಾರವನ್ನು, ದಾವಣಗೆರೆ ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳಾದ ಡಾ. ಸುರೇಶ್ ಬಿ. ಇಟ್ನಾಳ್  ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಸರ್ಕಾರದ ಯೋಜನಾ ಆಯೋಗದ ಮಾಜಿ ಸದಸ್ಯರಾದ ಡಾ. ಕೆ.ಪಿ. ಬಸವರಾಜಪ್ಪ ನವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರದರ್ಶನದಲ್ಲಿ ಒಟ್ಟು ೪೦ ಕ್ಕೂ ಹೆಚ್ಚು ಮಳಿಗೆ ಹಾಕಲಾಗಿದ್ದು, ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ಸಬ್ಸಿಡಿ ದರದಲ್ಲಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಬಸವನಗೌಡ, ಸುಪ್ರಿಯ ಪಾಟೀಲ್ ಇದ್ದರು.