ವೇತನ ಆಯೋಗದಲ್ಲಿ ನಿವೃತ್ತರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮನವಿ
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಸೆ.28: ಏಳನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಶುಕ್ರವಾರ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಏಳನೇ ವೇತನ ಆಯೋಗದ ಶಿಫಾರಸ್ಸು ಅನ್ವಯ ಸರ್ಕಾರದ ಆದೇಶದಲ್ಲಿ ದಿನಾಂಕ 1-7-2022 ರಿಂದ 31-7-2024 ರೊಳಗೆ ನಿವೃತ್ತಿ ಹೊಂದಿದವರಿಗೆ ವೇತನ ಪರಿಷ್ಕರಿಸುವಲ್ಲಿ ಆರ್ಥಿಕವಾಗಿ ಅನ್ಯಾಯವಾಗಿದೆ, ಆಗಿರುವ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಸಂಬಂಧಿಸಿದ ಅಧಿಕಾರಿಗಳು ಅನ್ಯಾಯಗೊಳಪಟ್ಟ ನೌಕರರ ಸೇವಾ ವಿವರದೊಂದಿಗೆ ಆರ್ಥಿಕ ಲೆಕ್ಕಾಚಾರ ಮಾಡಿ ಸಕಾರಕ್ಕೆ ವರದಿ ಸಲ್ಲಿಸಬೇಕೆಂದು ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ನಿವೃತ್ತ ನೌಕರರ ಸಂಘದ ಜಿಲ್ಲಾ ಸಂಚಾಲಕ ಸಿದ್ದಲಿಂಗನಗೌಡ, ತಾಲೂಕು ಅಧ್ಯಕ್ಷ ಶೇಖರಗೌಡ ಪಾಟೀಲ್, ತಾಲೂಕು ಸಂಚಾಲಕರಾದ ಶಿವಾನಂದಪ್ಪ, ಮೂರ್ತಿನಾಯ್ಕ, ಚನ್ನಬಸಪ್ಪ, ಕಾರ್ಯದರ್ಶಿ ಶೇಖರಪ್ಪ, ಕೊಟ್ರಯ್ಯಸ್ವಾಮಿ, ಪ್ರಕಾಶ್, ಕೃಷ್ಣಪ್ಪ ಇದ್ದರು.