ಗುರುಪೂರ್ಣಿಮೆಯಂದು ಮಾತಾ ಮಾಣಿಕೇಶ್ವರಿ ಅಮ್ಮನವರ 91ನೇ ಜನ್ಮದಿನೋತ್ಸವ
ಕಲಬುರಗಿ:ಜು.18: ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿಯಲ್ಲಿ ಗುರುಪೂರ್ಣಿಮೆಯಂದು ಜುಲೈ 21ರಂದು ಮಹಾಯೋಗಿನಿ ರೂಪ ರಹಿತ ಅಹಿಂಸಾ ಯೋಗೇಶ್ವರಿ ವೀರಧರ್ಮಜ್ ಮಾತಾಜಿ (ಶ್ರೀ ಮಾತಾ ಮಾಣಿಕೇಶ್ವರಿ) ಅಮ್ಮನವರ 91ನೇ ಜನ್ಮದಿನೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಮಾತಾಜಿ ಟ್ರಸ್ಟ್ ಅಧ್ಯಕ್ಷ ಸಿದ್ರಾಮಪ್ಪ ಸಣ್ಣೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಗೆ ಮಾತಾಜಿಯವರ ಮಹಾರುದ್ರಾಭಿಷೇಕದೊಂದಿಗೆ ಪಾದಪೂಜೆ ಕಾರ್ಯಕ್ರಮ ಹಾಗೂ ಸಂಜೆ 7 ಗಂಟೆಗೆ ರಥೋತ್ಸವ ನೆರವೇರಲಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಇತರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸುವರು. ಭಕ್ತರಿಗೆ ಆ ಸಂದರ್ಭದಲ್ಲಿ ಮಹಾದಾಸೋಹ, ನೀರು, ಬಸ್ಸು ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
ಪ್ರತಿ ವರ್ಷ ಕಾರ್ಯುಕ್ರಮದಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಅದನ್ನು ತಡೆಯಲು ವಿಶೇಷವಾಗಿ ಮಹಿಳಾ ಭಕ್ತರು ಸಮಾರಂಭದಲ್ಲಿ ಅಮೂಲ್ಯವಾದ ಆಭರಣಗಳನ್ನು ಧರಿಸಬಾರದು ಎಂದು ಮನವಿ ಮಾಡಿದ ಅವರು, ವಿಶೇಷ ಪೋಲಿಸರನ್ನು ನೇಮಕ ಮಾಡುವುದಲ್ಲದೇ ತೆಲಂಗಾಣದ ಪತ್ತೆ ದಳದ ಪೋಲಿಸರ ನೆರವಿಗೆ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಗೆ ಕೋರಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಗುರುಮಿಠಕಲ್ ಕ್ಷೇತ್ರದ ಶಾಸಕ ಶರಣಗೌಡ ಪಾಟೀಲ್, ರಾಜ್ಯ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಮಾತಾಜಿಯವರ ಕೋಟಿಲಿಂಗ ಸ್ಥಾಪನೆಗೆ ವಿಶೇಷ ನೆರವು ನೀಡಲಿದ್ದು ಆಗಮಿಸುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯಸ್ವಾಮಿ, ಸೂರ್ಯಕಾಂತ್ ಅವರಾದ್(ಬಿ), ರಾಜು ಸೊನ್ನ ಅವರು ಉಪಸ್ಥಿತರಿದ್ದರು.