ಮಾನವನಿಗೆ ಬದುಕಿನ ನೀತಿ ಪಾಠ ಕಲಿಸುವ ಶಾಲೆ ರಂಗಭೂಮಿ
ಕಲಬುರಗಿ:ಜು.18: ಈ ಭಾಗದ ಕಲಾವಿದರ ಬದುಕು ದುಸ್ತರ ಸ್ಥಿತಿಯಲ್ಲಿದ್ದು, ರಂಗಭೂಮಿಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಸಲುವಾಗಿ ಕಲಾವಿದರನ್ನು ಜೀವಂತವಾಗಿರಿಸಲು ಅವರಿಗೆ ಅಕಾಡೆಮಿಯ ವತಿಯಂದ ಸೂಕ್ತ ಸವಲತ್ತುಗಳನ್ನು ಒದಗಿಸಿಕೊಡಲಾಗುವುದು ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಹೇಳಿದರು.
ನಗರದ ಕನ್ನಡ ಭವನಕ್ಕೆ ಗುರುವಾರ ಭೆಟ್ಟಿ ನೀಡಿದ ಹಿನ್ನೆಲೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಗೌರವ ಸಮ್ಮಾನ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಕೇವಲ ಮನರಂಜನೆಗಷ್ಟೇ ಅಲ್ಲದೇ ಬದುಕಿನ ಮೌಲ್ಯವನ್ನು ತಿಳಿಸಿಕೊಡುವುದು ನಾಟಕ ಕಲೆ, ಮಾನವನಿಗೆ ಬದುಕಿನ ನೀತಿ ಪಾಠ ಕಲಿಸುವ ಶಾಲೆ ಅದುವೇ ರಂಗಭೂಮಿ ಯಾಗಿರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಶರಣರ ನಾಟಕೋತ್ಸವ, ವಿಚಾರ ಸಂಕಿರಣ ಹೀಗೆ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಅಲೋಚನೆ ಹೊಂದಲಾಗಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇವತ್ತಿನ ದಿನಮಾನಗಳಲ್ಲಿ ಟಿ.ವಿ., ಮೊಬೈಲ್, ಇಂಟರ್‍ನೆಟ್ ಹಾವಳಿಯಿಂದಾಗಿ ನಾಟಕಗಳು ಹಿಂದಕ್ಕೆ ಸರಿಯುತ್ತಿದೆ. ಅದರ ಜತೆಗೆ ನಾಟಕ ಕಲಾವಿದರ ಬದುಕು ಕೂಡ ತೀರಾ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಕಲೆ ಮತ್ತು ಕಲಾವಿದರನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಈ ನಿಟ್ಟಿನಲ್ಲಿ ಪ್ರತಿಭಾವಂತರಿಗೆ ಅವಕಾಶ ಕೊಡುವ ಕಾರ್ಯಮ ಪರಿಷತ್ತು ಮಾಡುತ್ತಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಜೇವರ್ಗಿ ರಾಜಣ್ಣ, ಕಸಾಪ ದಕ್ಷಿಣ ವಲಯ ಅಧ್ಯಕ್ಷ ಶಾಮಸುಂದರ ಕುಲಕರ್ಣಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ, ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ, ಕಜಾಪ ಅಧ್ಯಕ್ಷ ಸಿ.ಎಸ್. ಮಾಲಿ ಪಾಟೀಲ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕಸಾಪ ತಾಲೂಕಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ, ಪ್ರಮುಖರಾದ ಹಣಮಂತಪ್ರಭು, ಎಂ. ಎನ್ .ಸುಗಂಧಿ, ಶಿವಶರಣ ಬಡದಾಳ, ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ, ಸಿ.ಎಸ್. ಆನಂದ, ಮಹೇಶ ಕುರಿಕೋಟಾ ಅವರಾದ, ಸೋಮಶೇಖರಯ್ಯಾ ಹೊಸಮಠ, ಬಸಯ್ಯಾ ಸ್ವಾಮಿ, ರೇವಣಸಿದ್ದಪ್ಪ ಜೀವಣಗಿ, ಶಿವಕುಮಾರ ಸಿ.ಎಚ್., ವಿಶ್ವನಾಥ ಭಕರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.