ಶಹಾಬಾದ ಕೆನರಾ ಬ್ಯಾಂಕ್‍ನಲ್ಲಿ ಕಳ್ಳತನ: ಇಬ್ಬರ ಬಂಧನ
ಕಲಬುರಗಿ,ಜು.18-ಶಹಾಬಾದ ನಗರದ ಕೆನರಾ ಬ್ಯಾಂಕ್‍ನಲ್ಲಿ ಈಚೆಗೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಶಹಾಬಾದ ರೈಲ್ವೆ ಸ್ಟೇಷನ್ ಹತ್ತಿರದ ದಕ್ಕಾ ತಾಂಡಾದ ಪೂನಮ್ ಅಲಿಯಾಸ್ ದೀಯಾ ಗಂಡ ಕೃಷ್ಣ ಕಾಂಬ್ಳೆ ಅಲಿಯಾಸ್ ಉಪಾಧ್ಯ (22) ಮತ್ತು ಕಿರಣ್ ಗಂಡ ಗಣಪತಿ ಸಕಟ್ (27) ಎಂಬುವವರನ್ನು ವಶಕ್ಕೆ ಪಡೆದು ಕಳ್ಳತನವಾದ 50 ಸಾವಿರ ರೂ.ಹಣ ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶಹಾಬಾದ ಶಾಸ್ತ್ರಿ ಚೌಕ್ ಬಂಕಟನಾಳದ ತಾಹೇರಾಬಿ ಹುಸೇನಸಾಬ ಅವರು ಶಬಾಬಾದ ನಗರದ ಕೆನರಾ ಬ್ಯಾಂಕ್‍ನಿಂದ 50 ಸಾವಿರ ರೂ.ಡ್ರಾ ಮಾಡಿಕೊಂಡು ಹೋಗುತ್ತಿದ್ದಾಗ ಕಳ್ಳರು ಅವರ ಬ್ಯಾಗ್ ಕತ್ತರಿಸಿ ಹಣ ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಎಸ್‍ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್‍ಪಿ ಶ್ರೀನಿಧಿ, ಶಹಾಬಾದ ಡಿಎಸ್‍ಪಿ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಐ ನಟರಾಜ ಲಾಡೆ, ಪಿಎಸ್‍ಐಗಳಾದ ಚಂದ್ರಕಾಂತ, ಶಾಮರಾಯ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ದೊಡ್ಡಪ್ಪ, ಬಸವರಾಜ, ಸಂತೋಷ, ಹುಸೇನ ಪಾಷಾ, ಶ್ರೀಕಾಂತ, ಹಂಪಮ್ಮ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ಬ್ಯಾಂಕಿನ್ ಸಿಸಿಟಿವಿ ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.