ನಾಗಠಾಣದಲ್ಲಿ ಮೊಹರಂ ಆಚರಣೆ
ವಿಜಯಪುರ,ಜು.18: ಜಾತಿ-ಧರ್ಮದ ಹಂಗಿಲ್ಲದೇ ಮನುಕುಲ ಒಂದೇ ಎಂಬ ಸಂದೇಶ ಸಾರುವ, ಸರ್ವಧರ್ಮಗಳ ಭಾವೈಕ್ಯತೆಯ ಕೊಂಡಿಯಾಗಿರುವ ಮೊಹರಂ ಹಬ್ಬದ ಆಚರಣೆ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಸ್ನೇಹ, ಭ್ರಾತೃತ್ವದ ಸಂಕೇತವಾಗಿ ಜರುಗಿತು.
ಅಲಾಯಿ ಹಬ್ಬ ಎಂತಲೂ ಕರೆಯುವ ಈ ಹಬ್ಬವನ್ನು ಗ್ರಾಮದಲ್ಲಿ ಅತ್ಯಂತ ಉತ್ಸಾಹದಿಂದ ಆಚರಿಸಿದರು. ಈ ಹಬ್ಬದಲ್ಲಿ ಚಿಣ್ಣರನ್ನು ನೋಡುವುದೇ ಒಂದು ಮಜ. ಐದು ದಿನಗಳವರೆಗೆ ಕೂರಿಸಲಾಗುವ ಅಲಾಯಿ (ಪಂಜಾ) ದೇವರಿಗೆ ಕುಣಿ ತೆಗೆದು ಅಗ್ನಿಕುಂಡ ಪ್ರವೇಶ ಮಾಡುವ ದೃಶ್ಯ ಮೈನವಿರೇಳುವಂತಿತ್ತು. ಇನ್ನೊಂದೆಡೆ ಅಲಾಯಿ ದೇವರ ಎದುರಿಗೆ ವೃತ್ತಾಕಾರದ ಇಟ್ಟಿಗೆಗಳನ್ನಿಟ್ಟು ಮೊಹರಂ ಕೊನೆಯ ದಿನ ಹಬ್ಬ ಆಚರಿಸುವ ಸಂಪ್ರದಾಯ ಗ್ರಾಮದಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ.
ಮಸೀದೆಯಲ್ಲಿ ಡೋಲಿ ಮತ್ತು ಪಂಜಾ ದೇವರುಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಬೆಳಗ್ಗೆಯಿಂದಲೇ ಹಿಂದೂ ಮುಸಲ್ಮಾನ ಬಾಂಧವರು ತಂಡೋಪತಂಡವಾಗಿ ಸಕ್ಕರೆ ಬೆಲ್ಲ ನೇವೇದ್ಯವನ್ನು ಅರ್ಪಿಸುವುದು ಸಾಮಾನ್ಯವಾಗಿತ್ತು. ಗ್ರಾಮದ ಪ್ರಮುಖ ರಸ್ತೆಯಲ್ಲಿ ಡೋಲಿ ದೇವರ ಮೆರವಣಿಗೆ ಸಡಗರದಿಂದ ಜರುಗಿತು.
ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೆ ಸಮರ್ಪಿಸಿಕೊಂಡ ಹಜರತ್ ಹಸನ್ ಮತ್ತು ಹುಸೇನರ ಪುಣ್ಯ ಸ್ಮರಣೆಯ ನಿಮಿತ್ತ ಆಚರಿಸುವ ಈ ಹಬ್ಬದ ದಿನದಂದು ಜಾನಪದ ಹಾಡುಗಳೊಂದಿಗಿನ ಹೆಜ್ಜೆಯಾಟವನ್ನು ವೀಕ್ಷಿಸಲು ಅತ್ಯಂತ ಉತ್ಸುಕತೆಯಿಂದ ಗ್ರಾಮದ ಜನ ಸೇರಿದ್ದು ಇಲ್ಲಿನ ವಿಶೇಷವಾಗಿತ್ತು.