ಬಸವಕಲ್ಯಾಣ ಮತ ಕ್ಷೇತ್ರದಲ್ಲಿ 3436 ಎಕರೆ 35 ಗುಂಟೆ ವಕ್ಫ್ ಜಮೀನು
ಬಸವಕಲ್ಯಾಣ: ಜು.18:ಬಸವಕಲ್ಯಾಣ ಮತ ಕ್ಷೇತ್ರದಲ್ಲಿ 3436 ಎಕರೆ 35 ಗುಂಟೆ ವಕ್ಫ್ ಜಮೀನಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ ಅಹ್ಮದ ತಿಳಿಸಿದ್ದಾರೆ.
ವಿಧಾನ ಸÀಭೆ ಅದಿವೇಶನದಲ್ಲಿ ಬಸವಕಲ್ಯಾಣ ಮತ ಕ್ಷೇತ್ರದಲ್ಲಿ ವಕ್ಫ್ ಜಮೀನು ಎಷ್ಟಿದೆ. ಕಳೆದ ಮೂರು ವರ್ಷಗಳಿಂದ ಇಲ್ಲಿವರೆಗೆ ರೈತರ ಜಮೀನು ಪಹಣಿ ಕಾಲಂ 9 ಮತ್ತು 11 ರಲ್ಲಿ ವಕ್ಫ್ ಮಂಡಳಿ ಎಂದು ನಮೂದಿಸಿದ ಪ್ರಕರಣಗಳು ಎಷ್ಟು ಎಂದು ಕ್ಷೇತ್ರದ ಶಾಸಕ ಶರಣು ಸಲಹರ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.
ಸರಕಾರದ ಸುತ್ತೋಲೆ ಆರ್‍ಡಿ 48 ಎಲ್‍ಜಿಪಿ 2016 ದಿನಾಂಕ 28-10-2016ರಂತೆ ವಕ್ಫ್ ಆಸ್ತಿಗಳಿಗೆ ಖಾತಾ ಇಂಡೀಕರಣ ಮಾಡಲು ಸೂಚಿಸಲಾಗಿರುತ್ತದೆ. ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಮಂಡಳಿ ಎಂದು ನಮೂದಿಸಿದ ಪ್ರಕರಣಗಳಿರುವದಿಲ್ಲ. ವಕ್ಫ್ ಆಸ್ತಿಗಳಿಗೆ ಮಾತ್ರ ಖಾತಾ ಇಂಢೀಕರಣ ಮಾಡಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ರೈತರ ಪಹಣಿಯಲ್ಲಿ ವಕ್ಫ್ ಮಂಡಳಿ ಎಂದು ಸೇರಿಸಿದಲ್ಲಿ ರೈತರಿಗೆ ಬ್ಯಾಂಕ್ ಸಾಲ ಹಾಗೂ ಜಮೀನು ಮಾರಾಟ ಮಾಡಲು ಸಮಸ್ಯೆ ಆಗುತ್ತಿರುವದು ಸರಕಾರದ ಗಮನಕ್ಕೆ ಬಂದಿದಿಯೇ, ಬಂದಿದ್ದಲ್ಲಿ ರೈತರ ತೊಂದರೆ ಪರಿಹಾರಕ್ಕೆ ಸರಕಾರ ಕೈಗೊಂಡ ಕ್ರಮ ಕುರಿತ ಶಾಸಕರ ಪ್ರಶ್ನೆಗೆ, ಸಮಸ್ಯೆ ಉದ್ಭವಿಸುವದಿಲ್ಲ ಎಂದು ಸಚಿವರು ಉತ್ತರಿಸಿದ್ದಾರೆ.