ಕೌಶಲಗಳ ಅಳವಡಿಕೆಯಿಂದ ನಿರುದ್ಯೋಗ ನಿವಾರಣೆ
ಕಲಬುರಗಿ: ಜು.18:ಇಂದಿನ ಯುವಕರು ಕೇವಲ ಪದವಿ, ಪ್ರಮಾಣಪತ್ರ ಪಡೆದರೆ ಸಾಲದು. ಜೊತೆಗೆ ವಿಷಯದ ಜ್ಞಾನವನ್ನು ಕಾರ್ಯರೂಪದಲ್ಲಿ ತರುವ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ. ಸ್ವಯಂ ಉದ್ಯೋಗ ಮಾಡಲು ಅನಕೂಲವಾಗುತ್ತದೆ. ನಿರುದ್ಯೋಗ ನಿವಾರಣೆಯಾಗುತ್ತದೆ ಎಂದು ಯುವ ಕೌಶಲ ಅಭಿವೃದ್ಧಿ ತರಬೇತಿದಾರ, ಸಂಪನ್ಮೂಲ ವ್ಯಕ್ತಿ ಗೀತಾ ಮಮದಾಪೂರ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ಯುವ ಕೌಶಲಗಳ ಅಭಿವೃದ್ಧಿ ವಿಶೇಷ ಉಪನ್ಯಾಸ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಪದವಿ ಪಡೆದಿದ್ದೇವೆಯೆಂದು ಎಲ್ಲರಿಗೂ ಸರ್ಕಾರಿ ನೌಕರಿ ದೊರೆಯುವುದಿಲ್ಲ. ಯುವಕರು ಸರ್ಕಾರಿ ನೌಕರಿಯ ಮೇಲೆಯೇ ಅವಲಂಬನೆ ಬೇಡ. ಉದ್ಯೋಗದ ಕೌಶಲಗಳನ್ನು ಅಳವಡಿಸಿಕೊಂಡು ಖಾಸಗಿ ಕ್ಷೇತ್ರ ಮತ್ತು ಉದ್ಯೋಗದಾತರಾರುವ ಮೂಲಕ ನಿರುದ್ಯೋಗ ಸಮಸ್ಯೆ ಹೋಗಲಾಡಿಸಬಹುದಾಗಿದೆ. ಸರ್ಕಾರದ ಕೌಶಲಗಳ ಅಭವೃದ್ಧಿ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಯುವಕರು ಪರಿಣಿತರಿಂದ ಹೊಸ-ಹೊಸ ಕೌಶಲಗಳನ್ನು ತಿಳಿದುಕೊಂಡು ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಲ್ಲಿಕಾರ್ಜುನ ದೊಡ್ಡಮನಿ, ಮಹಮ್ಮದ್ ಅಬ್ದುಲ್ ಸಮದ್ ಸೇರಿದಂತೆ ಉಪನ್ಯಾಸಕರು, ಸ್ವಯಂ ಸೇವಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.