ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ
ಬೀದರ್: ಜು.18:ಜಿಲ್ಲೆಯ ಅಭಿವೃದ್ಧಿಗೆ ಅವಿರತ ಶ್ರಮಿಸುವೆ ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು.
ವೀರಶೈವ ಲಿಂಗಾಯತ ಸೇವಾ ಸಮಿತಿಯ ವತಿಯಿಂದ ನಗರದ ಪಾಪನಾಶ ದೇಗುಲದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಐತಿಹಾಸಿಕ ಪಾಪನಾಶ ದೇವಸ್ಥಾನಕ್ಕೆ ಅಗತ್ಯ ಸೌಕರ್ಯ ಕಲ್ಪಿಸಲು ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಸಂಸದನಾಗಿ ನನ್ನನ್ನು ಆಯ್ಕೆಗೊಳಿಸಿರುವ ಕ್ಷೇತ್ರದ ಜನರ ಹಿತ ರಕ್ಷಣೆಯೇ ನನ್ನ ಧ್ಯೇಯವಾಗಿದೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಸೇವಾ ಸಮಿತಿ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಸಾನಿಧ್ಯ ವಹಿಸಿದ್ದ ಹಲಬರ್ಗಾ-ಶಿವಣಿ-ಹೈದರಾಬಾದ್ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.
ಭಾಲ್ಕಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಬಾಪುರಾವ್ ದೇಶಮುಖ, ಸಹಕಾರ ಧುರೀಣ ಜಗನ್ನಾಥ ಕರಂಜೆ, ದೇವಸ್ಥಾನದ ಚಂದ್ರಕಾಂತ ಶೆಟಕಾರ್, ಚಂದ್ರಶೇಖರ ಬನ್ನಾಳೆ, ರಾಜಕುಮಾರ ನಾಯಿಕೋಡೆ, ಸುದರ್ಶನ್ ಬಿರಾದಾರ, ಜ್ಯೋತಿಷ್ ಹಲಬುರ್ಗೆ, ಪವನಕುಮಾರ ಬಿರಾದಾರ, ಸತೀಶ್ ದೇಶಮುಖ, ರಾಜಕುಮಾರ ಪಾಟೀಲ ಮತ್ತಿತರರು ಇದ್ದರು.
ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪುರ ಸ್ವಾಗತಿಸಿದರು.
ಕಾರ್ಯಕ್ರಮದ ನಂತರ ಭಜನೆಯಲ್ಲಿ ಪಾಲ್ಗೊಂಡ ಸಂಸದ ಖಂಡ್ರೆ ಅವರು, ಭಕ್ತರಿಗೆ ಪ್ರಸಾದವನ್ನೂ ಬಡಿಸಿದರು.