ಕಲ್ಯಾಣ ಕರ್ನಾಟಕದ ಹಳೆಬೀಡು:ಕಾಳಗಿ
ಕಾಳಗಿ:ಜು.18:ಐತಿಹಾಸಿಕ ಸ್ಮಾರಕಗಳು ಅಮೂಲ್ಯ ಸ್ವತ್ತಾಗಿದ್ದು, ಅವುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ, ಅವಸಾನದ ಅಂಚಿನಲ್ಲಿರುವ ಕಾಳಗಿಯ ಸ್ಮಾರಕಗಳ ಸಂರಕ್ಷಣೆಗೆ ಗಂಭೀರ ಚಿಂತನೆ ಅಗತ್ಯವಿದೆ ಎಂದು ಸಂಶೋಧಕ, ಸಾಹಿತಿ ಮುಡಬಿ ಗುಂಡೇರಾವ ಸೇಡಂ ಹೇಳಿದರು.
ಪಟ್ಟಣದ ಮೆಟ್ರಿಕ ನಂತರದ ಬಾಲಕರ ವಸತಿ ನಿಲಯದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡ ಕಲ್ಯಾಣ ಕರ್ನಾಟಕದ ಹಳೆಬೀಡು-ಕಾಳಗಿ, ನಮ್ಮೂರು ನಮಗೆ ಮೇಲು ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಪ್ರತಿವರ್ಷ ಕಾಳಗಿ ಉತ್ಸವ ಆಗಬೇಕು, ಕಾಳಗಿ ಇತಿಹಾಸವನ್ನು ಪಠ್ಯಕ್ರದಲ್ಲಿ ಸೇರಿಸಬೇಕು, ಅಲ್ಲದೆ ಕಾಳಗಿ ಪ್ರವಾಸಿ ತಾಣವಾಗುವ ಎಲ್ಲಾ ಅರ್ಹತೆ ಹೊಂದಿದೆ. ಕಾಳಗಿಗೆ ಪೌರಾಣಿಕ ಹಿನ್ನಲೆ ಇದ್ದು ಸಾವಿರ ಹಳ್ಳಿಗಳಿಗೆ ರಾಜಧಾನಿಯಾಗಿ ಮೆರೆದಿತ್ತು, ಹಾಗೂ ಅಂತರಾಷ್ಟ್ರೀಯ ವಾಣಿಜ್ಯ ಕೇಂದ್ರವಾಗಿತ್ತು, 11 ಶತಮಾನದಲ್ಲಿ ಜಗತ್ತಿನ ಅನೇಕ ದೇಶಗಳೊಂದಿಗೆ ವಾಣಿಜ್ಯ ಸಂಪರ್ಕ ಹೊಂದಿತ್ತು ಎಂದು ಹೇಳಿದರು.
ಇಲ್ಲಿಯ ಸ್ಮಾರಕಗಳು ಹಾನಿಗೊಳಗಾಗುತ್ತಿದ್ದು ಅತ್ಯಂತ ನೋವಿನ ಸಂಗತಿಯಾಗಿದೆ. ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು, ಪಕ್ಷಾತೀತವಾಗಿ ಜನಪ್ರತಿನಿಧಿಗಳು, ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಪ್ರತಿಯೊಬ್ಬ ನಾಗರಿಕನೂ ಸ್ಮಾರಕಗಳ ಉಳಿವಿಗೆ ಮುಂದಾಗಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾಳಗಿ ತಾಲೂಕಾಧ್ಯಕ್ಷ ಶರಣಗೌಡ ಪೋಲಿಸ ಪಾಟೀಲ್ ಮಾತನಾಡಿ, ಸಾಂಸ್ಕøತಿಕ ಪರಂಪರೆ ಪೌರಾಣಿಕ ಹಿನ್ನಲೆಯುಳ್ಳ ಕಾಳಗಿ ಭವ್ಯ ಇತಿಹಾಸವನ್ನು ಹೊಂದಿದೆ. ನಿರ್ಲಕ್ಷಕ್ಕೆ ಒಳಗಾಗಿರುವ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಅಂದಾಗ ಮಾತ್ರ ಮುಂದಿನ ಪೀಳಿಗೆಗೆ ಸ್ಮಾರಕಗಳು ಉಳಿಯಲು ಸಾಧ್ಯ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಕೋಡ್ಲಿ ಹಿರೇಮಠದ ಪೂಜ್ಯ ಬಸವಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಚಿಂಚೋಳಿ ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೇಂಗಟಿ, ಉಧ್ಯಮಿ ರವಿದಾಸ ಪತಂಗೆ, ಯುವ ಮುಖಂಡ ಭೀಮರಾಯ ಮಲಘಾಣ, ಸಾಯಿಕೃಷ್ಣ ರಟಕಲ್ ಮಾತನಾಡಿದರು.
ನಿಲಯ ಮೇಲ್ವಿಚಾರಕ ಬಾಲಾಜಿ ಘಾಟಗೆ ಅಧ್ಯಕ್ಷತೆ ವಹಿಸಿದ್ದರು. ಉಧ್ಯಮಿ ಚಂದ್ರಕಾಂತ ವನಮಾಲಿ, ಕಸಾಪ ಜಿಲ್ಲಾ ಸಹಕಾರ್ಯದರ್ಶಿ ರಾಜೇಂದ್ರಬಾಬು ಮಾಡಬೂಳಕರ್, ಮುಖಂಡರಾದ ಸುಂದರ ಸಾಗರ, ತಾಲೂಕಾ ಕಸಾಪ ಗೌರವ ಕಾರ್ಯದರ್ಶಿ ಯಲ್ಲಾಲಿಂಗ ಪಾಟೀಲ್, ರಾಜೇಂದ್ರಬಾಬು ಹೀರಾಪೂರ, ಶ್ರೀಕಾಂತ ಕದಂ, ಇತರರು ಇದ್ದರು.
ಸುಲೋಚನಾ ರಾಠೋಡ ಪ್ರಾರ್ಥಿಸಿದರು. ಸುಧಾರಾಣಿ ಚಿದ್ರಿ ಸ್ವಾಗತಿಸಿದರು. ಕಸಾಪ ಅಧ್ಯಕ್ಷ ಸಂತೋಷ ಕುಡ್ಡಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ ಶಾಸ್ತ್ರೀ ನಿರುಪಿಸಿ ವಂದಿಸಿದರು.