ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ
ಧಾರವಾಡ,ಜು.18: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನವನ್ನು ಜುಲೈ 29 ರಿಂದ ಆಗಸ್ಟ 14 ರ ವರೆಗೆ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಮನ್ವಯದಲ್ಲಿ ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ, ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ ಕುರಿತ ವಿವಿಧ ಇಲಾಖೆಗಳ ಸಮನ್ವಯ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಅಭಿಯಾನದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಅಂದಾಜು 21,48,456 ಜನಸಂಖ್ಯೆ ಇದ್ದು, ಸರಿಸುಮಾರು 4,29,691 ಮನೆಗಳಿಗೆ ಅಭಿಯಾನದಲ್ಲಿ ಭೇಟಿ ನೀಡುವ ಅಗತ್ಯವಿದೆ.ಇದಕ್ಕಾಗಿ 153 ಮೇಲ್ವಿಚಾರಕರು, 3070 ಜನ ಸಿಬ್ಬಂದಿಗಳಿರುವ 1535 ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಭಿಯಾನದಲ್ಲಿ 21,48,456 ಜನಸಂಖ್ಯೆಯನ್ನು ಸಮೀಕ್ಷೆಗೊಳಪಡಿಸಲು ಯೋಜಿಸಲಾಗಿದ್ದು, ಸಮೀಕ್ಷೆಯ ಪ್ರತಿ ತಂಡದಲ್ಲಿ ಒಬ್ಬ ಮಹಿಳಾ ಸ್ವಯಂಸೇವಕರು ಹಾಗೂ ಒಬ್ಬ ಪುರುಷ ಸ್ವಯಂಸೇವಕರು ಕಾರ್ಯನಿರ್ವಹಿಸುವರು. ಪ್ರತಿ ಮನೆ-ಮನೆ ಭೇಟಿ ನೀಡಿ, ಪ್ರತಿಯೊಬ್ಬ ನಾಗರಿಕರನ್ನು ಪರೀಕ್ಷಿಸಲು ಯೋಜಿಸಲಾಗಿದೆ.
ಸಮೀಕ್ಷೆಯಲ್ಲಿ ಕುಷ್ಠರೋಗಿಗಳನ್ನು ಗುರುತಿಸಿ, ಭಾರತ ಸರ್ಕಾರದ ಗುರಿಯಂತೆ ಜಿಲ್ಲೆಯನ್ನು ಕುಷ್ಠರೋಗ ಮುಕ್ತವನ್ನಾಗಿಸಲು ಎಲ್ಲ ಇಲಾಖೆಗಳ ಸಹಭಾಗಿತ್ವದ ಅಗತ್ಯವಿದೆ. ಸಮೀಕ್ಷೆ ಅಂಗವಾಗಿ ಮಾದ್ಯಮಗಳಲ್ಲಿ ಹಾಗೂ ಐಇಸಿ ಮುಖಾಂತರ ಸಮುದಾಯದಲ್ಲಿ ಹೆಚ್ಚಿನ ಮಾಹಿತಿಯನ್ನು ಪ್ರಚುರಪಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪಾಟೀಲ ಶಶಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಸಿರ್ಂಗ್ ವಿದ್ಯಾರ್ಥಿಗಳೂ ಸಹ ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳು, ಜಿಲ್ಲಾ ಕುಷ್ಠರೋಗ ಸಲಹೆಗಾರರು, ಆರೋಗ್ಯ ಇಲಾಖೆ ವಿವಿಧ ಕಾರ್ಯಕ್ರಮ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು,ಸಿಬ್ಬಂದಿಗಳು ಸಮನ್ವಯ ಸಮಿತಿ ಸಭೆಯಲ್ಲಿ ಹಾಜರಿದ್ದರು.
ಸಭೆಯಲ್ಲಿ ರಾಷ್ಟೀಯ ಕುಷ್ಠರೋಗ ನಿರ್ಮೂಲನಾ ದಿನಾಚರಣೆಯ ಪೆÇಸ್ಟರ್, ಕರಪತ್ರ ಸೇರಿದಂತೆ ವಿವಿಧ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಅಧಿಕಾರಿಗಳು ಬಿಡುಗಡೆಗೊಳಿಸಿದರು.