ಡೆಂಗ್ಯೂ ತಡೆಗೆ ಜನರಲ್ಲಿ ಜಾಗೃತಿ ಮೂಡಿಸಿ – ಅಕ್ರಂ ಪಾಷ
ಕೋಲಾರ, ಜು.೧೮-ಡೆಂಗ್ಯೂ ಜ್ವರವು ಈಡಿಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ಈ ಡೆಂಗ್ಯೂ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂಗನವಾಡಿ ಕೇಂದ್ರಗಳಲ್ಲಿ ಡೆಂಗ್ಯೂ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಸಾರ್ವಜನಿಕರು ಡೆಂಗ್ಯೂ ಜ್ವರದ ಕುರಿತು ಭಯ ಹಾಗೂ ಆತಂಕಕ್ಕೆ ಒಳಗಾಗದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಡೆಂಗ್ಯೂ ಜ್ವರದಿಂದ ಸಂರಕ್ಷಿಸಿಕೊಳ್ಳಬೇಕು. ಡೆಂಗ್ಯೂ ನಿಯಂತ್ರಣಕ್ಕಾಗಿ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಬಹುಮುಖ್ಯವಾಗಿದೆ. ಈ ಕುರಿತು ಎಲ್ಲಾ ಇಲಾಖೆ ಅಧಿಕಾರಿಗಳು ಜನಜಾಗೃತಿ ಮೂಡಿಸುವ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪದ್ಮಬಸವಂತಪ್ಪ ಮಾತನಾಡಿ, ಸೊಳ್ಳೆಗಳ ಉತ್ಪತ್ತಿ ಸಂಪೂರ್ಣ ನಿಯಂತ್ರಿಸಬೇಕು. ಸೊಳ್ಳೆಗಳ ಸಂಭಾವ್ಯ ಸಂತಾನೋತ್ಪತ್ತಿ ಸ್ಥಳಗಳನ್ನು ನಾಶಪಡಿಸಲು ಎಲ್ಲರೂ ಮುಂದಾಗಬೇಕು. ನಿಂತ ನೀರು ಸೊಳ್ಳೆಗಳ ಉತ್ಪತ್ತಿಗೆ ಕಾರಣ. ನಿಂತ ನೀರನ್ನು ತೊಡೆದುಹಾಕಲು ಬ್ಯಾರಲ್‌ಗಳು, ಹೂದಾನಿಗಳು, ಬೇಸಿನ್‌ಗಳು ಅಥವಾ ಕಪ್‌ಗಳು ಮತ್ತು ಬಳಕೆಯಾಗದ ಟಯರುಗಳು ಸೇರಿದಂತೆ ನಿಂತಿರುವ ನೀರಿನ ಎಲ್ಲ ಮೂಲಗಳನ್ನು ತೆರವುಗೊಳಿಸಿ ಸೊಳ್ಳೆ ನಿವಾರಕಗಳನ್ನು ಬಳಸಿ ಸಾರ್ವಜನಿಕರು ಡೆಂಗ್ಯೂ ನಿಯಂತ್ರಿಸಬೇಕು ಎಂದರು. ಎರಡನೇ ಬಾರಿ ಡೆಂಗ್ಯೂ ಬಾಧೆಗೆ ಒಳಗಾದವರು ಸ್ವಲ್ಪವೂ ನಿರ್ಲಕ್ಷ್ಯ ಮಾಡಬಾರದು. ಯಾಕೆಂದರೆ ಅದು ತೀವ್ರ ಸ್ವರೂಪಕ್ಕೆ ಹೋಗುವ ಸಾಧ್ಯತೆಗಳು ಅಧಿಕವಾಗಿದೆ. ತಕ್ಷಣ ಚಿಕಿತ್ಸೆ ಪಡೆದು ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಬೇಕು ಎಂಬುದನ್ನು ಸಹ ಜನಸಾಮಾನ್ಯರಿಗೆ ಅರಿವು ಮೂಡಿಸುವದನ್ನು ಮರೆಯಬಾರದು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವಿಕುಮಾರ್ ಅವರು ಮಾತನಾಡಿ, ತೀವ್ರ ಜ್ವರ, ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಉಂಟಾಗುವುದು ಡೆಂಗ್ಯೂ ಜ್ವರದ ಲಕ್ಷಣಗಳಾಗಿವೆ. ಜ್ವರದ ಲಕ್ಷಣಗಳೊಂದಿಗೆ ಬಾಯಿ , ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವದ, ಚರ್ಮದ ಮೇಲೆ ರಕ್ತಸ್ರಾವದ ಗುರುತುಗಳು, ಕಪ್ಪುಮಲ ವಿಸರ್ಜನೆ , ವಿಪರೀತ ಬಾಯಾರಿಕೆ ಅಥವಾ ಜ್ಞಾನ ತಪ್ಪುವುದು ಇವುಗಳು ಡೆಂಗ್ಯೂ ಶಾಕ್ ಸಿಂಡ್ರೋಮ್‌ದ ಲಕ್ಷಣಗಳಾಗಿವೆ.
ಸಾರ್ವಜನಿಕರು ಯಾವುದೇ ಜ್ವರವಿದ್ದರೂ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು. ಸೊಳ್ಳೆಗಳ ನಾಶಕ್ಕೆ ಕೀಟನಾಶಕ ಸಿಂಪಡಿಸಲು ಬರುವ ಆರೋಗ್ಯ ಸಿಬ್ಬಂದಿಗೆ ನೆರವಾಗಿಗಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ತಹಶೀಲ್ದಾರರು ಚರಂಡಿಗಳನ್ನು ಪರಿಶೀಲಿಸುತ್ತಿರಬೇಕು ಹಾಗೂ ಎಲ್ಲಾ ಆಸ್ಪತ್ರೆಗಳಿಗೆ ಆಗಾಗ್ಗೆ ಭೇಟಿ ನೀಡುವಂತೆ ಡಾಃಚಂದನ್ ಮನವಿ ಮಾಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಗದೀಶ ಅವರು ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ ೧೦೭ ಡೆಂಗ್ಯೂ ಸಂಶಯಾಸ್ಪದ ಪ್ರಕರಣಗಳು ಕಂಡುಬಂದಿದ್ದು ಪ್ರಕರಣಗಳನ್ನು ಪರೀಕ್ಷಿಸಲಾಗಿದ್ದು ೭೦ ಡೆಂಗ್ಯೂ ಪ್ರಕರಣಗಳು ಖಚಿತಪಟ್ಟಿವೆ. ಇವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಸಾವು ಕಂಡು ಬಂದಿರುವುದಿಲ್ಲ ಎಂದರು.
ಸಭೆಯಲ್ಲಿ ಖಾಸಗಿ ವೈದ್ಯರ ಸಂಘದ ಅಧ್ಯಕ್ಷರಾದ ಎಂ ನಾರಾಯಣಸ್ವಾಮಿ ಡಾ. ಎನ್.ಸಿ. ನಾರಾಯಣಸ್ವಾಮಿ ನಗರಸಭೆ ಆಯುಕ್ತರಾದ ಶಿವಾನಂದ, ತಾಲ್ಲೂಕಗಳ ಪೌರಾಯುಕ್ತರು ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಶಾಖೆಯ ಕಾರ್ಯಕ್ರಮ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.