ರಾಜ ಮಹಾರಾಜರು ಸೇವೆ ಮೂಲಕವೇ ಪರಿಚಿತ
ಸಂಜೆವಾಣಿ ನ್ಯೂಸ್
ಮೈಸೂರು: ಜು.18:- ಮೈಸೂರಿಗೂ ಸಮಾಜ ಸೇವೆಗೂ ಅವಿನಾಭಾವ ಸಂಬಂಧವಿದೆ. ರಾಜ ಮಹಾರಾಜರು ಸಮಾಜ ಸೇವೆ ಮೂಲಕವೇ ವಿಶ್ವಕ್ಕೆ ಪರಿಚಿತರಾದವರು. ಅವರ ಪರಂಪರೆಯನ್ನು ಲಯನ್ಸ್‍ನಂತಹ ಸಂಘ, ಸಂಸ್ಥೆಗಳು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಬುಧವಾರ ನಗರದ ತಿಲಕ್ ನಗರದಲ್ಲಿರುವ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು 317ಜಿ ಜಿಲ್ಲೆ ವತಿಯಿಂದ ಏರ್ಪಡಿಸಿದ್ದ 2024-25ರ ನೂತನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನಿರ್ದೇಶಕರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1958ರಲ್ಲಿ ಪ್ರಾರಂಭವಾದ ಲಯನ್ಸ್ ಸಂಸ್ಥೆಯನ್ನು ನಮ್ಮ ತಾತ ಜಯಚಾಮರಾಜ ಒಡೆಯರ್ ಅಂದು ಉದ್ಘಾಟಿಸಿದ್ದರು.
ನಿರಂತರ 66 ವರ್ಷಗಳ ಕಾಲ ನಿಮ್ಮ ಸಂಸ್ಥೆ ಸಮಾಜ ಸೇವೆ ಮುಂದುವರೆಸಿಕೊಂಡು ಬಂದಿದೆ. ಇದು ಕಷ್ಟ ಸಾಧ್ಯ. ನಿಮ್ಮ ಸೇವಾ ಕಾರ್ಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಅವರಿಂದಲೂ ಇನ್ನಷ್ಟು ಸಮಾಜ ಸೇವೆ ಆಗಲಿ ಎಂದು ಸಲಹೆ ನೀಡಿದರು.
ಮೈಸೂರಿಗೆ ತನ್ನದೇ ಆದ ಪರಂಪರೆ ಇದೆ. ಇದು ಮುಮದುವರಿಯಬೇಕು. ಅಭಿವೃದ್ಧಿ ಕಾರ್ಯಗಳು ಬೇಕೇಬೇಕು. ಆದರೆ, ತಮ್ಮ ಸಂಸ್ಕೃತಿ, ಪರಂಪರೆ, ಪಾರಂಪರಿಕ ಕಟ್ಟಡಗಳ ರಕ್ಷಿಸುವ ಕೆಲಸವೂ ಆಗಬೇಕು. ಈ ನಿಟ್ಟಿನಲ್ಲಿ ಸಂಸದನಾಗಿ ನಾನು ಮೈಸೂರು ಹಾಗೂ ಕೊಡಗಿನ ಮೂಲ ಸ್ವರೂಪ ಉಳಿಸಿಕೊಂಡು ಅಭಿವೃದ್ಧಿ ಪಡಿಸುತ್ತೇನೆ ಎಂದು ಹೇಳಿದರು.
ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿ:
ಮೈಸೂರಿನಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಜನರು ಕಸವನ್ನು ಎಲ್ಲೆಂದರಲ್ಲಿ ಹಾಕುವುದನ್ನು ನಿಲ್ಲಿಸಬೇಕು. ನಮ್ಮ ಮನೆ, ನಗರ ಸ್ವಚ್ಚವಾದಲ್ಲಿ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ನೀವು ಕಾರ್ಯಕ್ರಮ ರೂಪಿಸಿ. ನಾನು ನಿಮ್ಮ ಜೊತೆಗಿರುತ್ತೇನೆ ಎಂದರು.
ಇದೇ ವೇಳೆ ಲಯನ್ ಡಾ.ಎನ್.ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಬಿ.ಭಾರತಿ, ಲಯನ್ಸ್‍ಗಳಾದ ಕೆ.ದೇವೇಗೌಡ, ಲಯನ್ ಕೆ.ಎಲ್.ರಾಜಶೇಖರ, ಬಿ.ಎಲ್.ಗಿರೀಶ್, ಶಿವಕುಮಾರ್, ಜೆ.ಲೋಕೇಶ್, ಕೆ.ಆನಂದಕೃಷ್ಣ, ಹೆಚ್.ಬಿ.ಸುರೇಶ್ ಮುಂತಾದವರು ಹಾಜರಿದ್ದರು.
ಇದೇ ವೇಳೆ 2024-25ರ ನೂತನ ಅಧ್ಯಕ್ಷ ಲಯನ್ ಬಿ.ಶಿವಣ್ಣ ಅವರಿಗೆ ಹಾಗೂ ಪದಾಧಿಕಾರಿಗಳು, ನಿರ್ದೇಶಕರಿಗೆ ಲಯನ್ ಕೆ.ಎಲ್.ರಾಜಶೇಖರ ಪ್ರಮಾಣ ವಚನ ಬೋಧಿಸಿದರು.