ಬಸವಣ್ಣನ ವಚನ ಪಾಲಿಸಿದರೆ ಭೂಮಿಯೇ ಸ್ವರ್ಗ
ಸಂಜೆವಾಣಿ ನ್ಯೂಸ್
ಮೈಸೂರು: ಜು.18:- ವಿಶ್ವ ಗುರು ಬಸವಣ್ಣನ ವಚನಗಳನ್ನು ಪಾಲಿಸಿದರೇ ಈ ಭೂಮಿಯೇ ಸ್ವರ್ಗವಾಗುತ್ತದೆ ಎಂದು ಸಂಸದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ನಗರದ ನಟರಾಜ ಸಭಾ ಭವನದಲ್ಲಿ ಮೈಸೂರು ಶರಣ ಮಂಡಲಿಯಿಂದ ಬುಧವಾರ ಆಯೋಜಿಸಿದ್ದ ಬಸವ ಜಯಂತಿ, ಬಸವರತ್ನ ಪ್ರಶಸ್ತಿ ಪ್ರದಾನ ಹಾಗೂ ವಾಟಾಳು ಶ್ರೀಗಳಿಗೆ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ 12ನೇ ಶತಮಾನದಲ್ಲಿ ವಚನಗಳನ್ನು ರಚನೆ ಮಾಡಿದ್ದಾರೆ. ಅದು ಆ ಕಾಲಕ್ಕೆ ಅಷ್ಟೇ ಅಲ್ಲ ಈಗಲೂ ಪ್ರಸ್ತುತವಾಗಿದೆ. ಭಾರತೀಯ ಪರಂಪರೆಯಲ್ಲಿ, ತತ್ವಶಾಸ್ತ್ರದಲ್ಲಿ ಇರುವ ವಿಷಯಗಳನ್ನು ಸಾಮಾನ್ಯರಿಗೂ ತಿಳಿಯುವಂತೆ ಆಡುಭಾಷೆಯಲ್ಲಿ ವಚನಗಳನ್ನು ಬರೆದಿದ್ದಾರೆ. ದೇವಲೋಕ, ಮತ್ಸ್ರ್ಯಲೋಕ ಎಂಬುವು ಇಲ್ಲ. ಆಚಾರವೇ ಸ್ವರ್ಗ, ಅನಾಚರವೇ ನರಕ ಎಂದು ಸರಳವಾಗಿ ಎರಡು ಸಾಲಿನಲ್ಲಿ ಜೀವನ ತಿಳಿಸಿದ್ದಾರೆ. ಜೀವನದಲ್ಲಿ ಯಾವ ಕೆಲಸವನ್ನಾದರೂ ಪ್ರಾಮಾಣಿಕತೆಯಿಂದ, ಶುದ್ಧತೆಯಿಂದ ಮಾಡಿದರೇ ನರಕ ಎನ್ನುವುದು ಹತ್ತಿರಕ್ಕೂ ಬರುವುದಿಲ್ಲ. ಆದರೆ ಸ್ವರ್ಗ ಎನ್ನುವುದು ನಮ್ಮ ಮುಂದೆ ಬರುತ್ತದೆ. ಆದ್ದರಿಂದ ಶರಣರ ವಚನಗಳ ಬೋಧನೆಗಳನ್ನು ಅರಿತುಕೊಂಡರೆ ಭೂಮಿ ಸ್ವರ್ಗವಾಗುತ್ತದೆ ಎಂದರು.
ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಒಳ್ಳೆಯ ರೀತಿಯಲ್ಲಿ ನಿರ್ಮಾಣ ಮಾಡಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸತ್ಯದ ಮಾರ್ಗದಲ್ಲಿ, ಜ್ಞಾನದ ಮಾರ್ಗದಲ್ಲಿ ಪ್ರಾಮಾಣಿಕತೆಯಿಂದ ನಡೆದರೆ ಸ್ವರ್ಗ ದರ್ಶನವಾಗುತ್ತದೆ. ದುಷ್ಟಕೂಟ ಕಟ್ಟಿಕೊಂಡು, ಅನ್ಯಾಯ ಮಾರ್ಗದಲ್ಲಿ ನಡೆದರೆ ನರಕ ಪ್ರಾಪ್ತಿಯಾಗುತ್ತದೆ ಎಂದು ಸುಲಭವಾಗಿ ಶರಣರು ಹೇಳಿದ್ದಾರೆ. ಈಗಲೂ ಬಹಳ ಜನರು ಇದನ್ನೆಲ್ಲ ಸುಲಲಿತವಾಗಿ ಹೇಳುತ್ತಾರೆ ಹೊರತು ಪಾಲಿಸುತ್ತಿಲ್ಲ. ಆದ್ದರಿಂದ ಬಸವೇಶ್ವರರ ವಚನಗಳನ್ನು ಹೇಳುವುದಷ್ಟೇ ಅಲ್ಲ ಆಚರಣೆಗೆ ತರುವುದು ಬಹಳ ಮುಖ್ಯ ಎಂದರು.
ಮೈಸೂರು ಅರಸರ ಪರಂಪರೆ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವನ್ನು ಅನುಸರಿಸಿಕೊಂಡು ಅಭಿವೃದ್ಧಿ ಕೆಲಸಗಳನ್ನು, ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಅದೇ ಪರಂಪರೆಯನ್ನು ಸಂಸದರಾಗಿ ನಾವು ಮುಂದುವರೆಸಿಕೊಂಡು ಹೋಗುತ್ತೇವೆ. ಹಿಂದಿನ ಪರಂಪರೆಗೂ ಧಕ್ಕೆಯಾಗದ ರೀತಿ, ಮುಂದಿನ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಾ ಜೊತೆಗೆ ಮೈಸೂರು ಮೈಸೂರಾಗಿಯೇ ಇರುವಂತೆ ನೋಡಿಕೊಳ್ಳುವ ಗುರುತರವಾದ ಜವಾಬ್ದಾರಿ ಇದೆ ಎಂದರು.
ಮೈಸೂರು ಸ್ವಚ್ಛ ನಗರಿಯಲ್ಲಿ ಮತ್ತೊಮ್ಮೆ ಅತ್ಯುನ್ನತ ಸ್ಥಾನಗಳಿಸಬೇಕು. ಇದಕ್ಕೆ ಜನರೆಲ್ಲರೂ ಅರಿವು ಹೊಂದಿ ನಮ್ಮ-ನಮ್ಮ ಕಸಕ್ಕೆ ನಾವೇ ಜವಾಬ್ದಾರರು ಎನ್ನುವುದನ್ನು ತಿಳಿದುಕೊಂಡು ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಎಲ್ಲೆಂದರಲ್ಲಿ ಕಸವನ್ನು ಎಸೆಯಬಾರದು. ನಾವು ಕಂಡ ಹಾಗೇ ಈ ಪ್ರವೃತ್ತಿಗೆ ವರ್ಗಬೇಧ ಎನ್ನುವುದೇ ಇಲ್ಲ. ಶ್ರೀಮಂತರು ಅದೇ ಕೆಲಸ ಮಾಡುತ್ತಾರೆ. ಬಡವರು ಅದನ್ನೇ ಮಾಡುತ್ತಾರೆ. ಆದ್ದರಿಂದ ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ದೀರ್ಘಕಾಲದ ಯೋಜನೆಗಾಗಿ ಈಗಿನಿಂದಲೇ ಶಾಲಾ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ, ಸ್ವಚ್ಛತೆ ಕುರಿತು ಅರಿವು ಮೂಡಿಸುವ ಅವಶ್ಯಕತೆಯೂ ಇದೆ ಎಂದು ಸಂಸದರು ಪರಿಸರದ ಜಾಗೃತಿಯ ಪಾಠವನ್ನೂ ಮಾಡಿದರು.
ವ್ಯಾಪಾರಿ ಕೇಂದ್ರಗಳಾಗಿರುವ ದೇವಾಲಯ: ಪ್ರಧಾನ ಭಾಷಣ ಮಾಡಿದ ನಟರಾಜ ಶಿಕ್ಷಣ ಸಂಸ್ಥೆಯ ವಿಶೇಷಾಧಿಕಾರಿ ಪೆÇ್ರ.ಎಸ್.ಶಿವರಾಜಪ್ಪ, ಆಧ್ಯಾತ್ಮದ ಮೂಲಕ ಸರ್ವರಲ್ಲೂ ಸಮಾನತೆ, ಶಾಂತಿ ಬೋಧಿಸಬೇಕಾಗಿರುವ ದೇವಾಲಯಗಳು ಪ್ರಸ್ತುತ ವ್ಯಾಪಾರಿ ಕೇಂದ್ರಗಳಾಗಿವೆ. ಸಂಪಾದನೆಯ ಪೈಪೆÇೀಟಿಯಲ್ಲಿ ಸಾಮಾಜಿಕ ಕೆಲಸವನ್ನೇ ಮರೆತುಬಿಟ್ಟಿವೆ. ಹಿರಿಯರು, ಆಳುವವರೂ ಕೂಡಾ ಸ್ವಾರ್ಥಕ್ಕಾಗಿ ಪರಿವರ್ತನೆಯಾಗಿರುವುದು ದುರ್ದೈವದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಬಸವಾದಿ ಶರಣರ ಒಂದೊಂದು ವಚನಗಳು ಬದುಕಿಗೆ ದೀವಟಿಗೆ ಇದ್ದಂತೆ. ಜೀವನದಲ್ಲಿ ಬರುವ ಕತ್ತಲನ್ನು ಓಡಿಸುವ ಬೆಳಕು. ಆದರೆ ಇಂದಿನ ದಿನಮಾನದಲ್ಲಿ ವಚನಗಳನ್ನು ಪಾಲಿಸುತ್ತಿಲ್ಲ. ಯುವ ಜನರು ಯಾವ ರೀತಿ ಮೋಸ, ಕಪಟ, ವಂಚನೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರ ಮೇಲೆ ಶೋಷಣೆ ಯಾವ ರೀತಿ ನಡೆಯುತ್ತಿದೆ ಇವುಗಳು ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿವೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವು ಇದ್ದೇವೆ. ಆದ್ದರಿಂದ ಬಸವಣ್ಣನವರ ಸಮಾನತೆ, ಕಾಯಕ ತತ್ವಗಳನ್ನು ಅನುಸರಣೆ ಮಾಡಿದರೇ ಕಲ್ಯಾಣಕಾರಕ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಗುರುವಂದನೆ: ಕಾರ್ಯಕ್ರಮದ ಅಂಗವಾಗಿ ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಬಸವರತ್ನ ಪ್ರಶಸ್ತಿ ಪ್ರದಾನ ಮಾಡಿ, ಗುರುವಂದನೆ ಸಲ್ಲಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪೆÇ್ರ.ಎಂ.ಕೋಮಲ, ಎಚ್.ಜಿ.ಪವಿತ್ರ, ಜೆ.ಬಾಪೂಜಿ, ಜಯಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಹೊಸಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಐಎಫ್‍ಎಸ್ ಅಧಿಕಾರಿ ಆರ್.ರಾಜು ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎಪಿಎನ್ ನಾಗೇಶ್, ಶರಣ ಮಂಡಲಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಉಪಾಧ್ಯಕ್ಷ ಎ.ಸಿ.ಜಗದೀಶ್, ಗೌರವಾಧ್ಯಕ್ಷ ಯು.ಎಸ್.ಶೇಖರ್ ಮತ್ತಿತರರು ಹಾಜರಿದ್ದರು.