ಉದ್ದಿಮೆ ಸ್ಥಾಪಿಸಲು ಕೇಂದ್ರ ಸಚಿವ ಹೆಚ್.ಡಿ.ಕೆ ಮುಂದಾಗಲಿದ್ದಾರೆ:ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.18: ಮಂಡ್ಯ ಜಿಲ್ಲೆ ಹಾಗೂ ನಮ್ಮ ತಾಲ್ಲೂಕಿನ ಜನತೆಗೆ ಉದ್ಯೋಗ ಕಲ್ಪಿಸುವ ಉದ್ದಿಮೆಗಳನ್ನು ಸ್ಥಾಪಿಸಲು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಮುಂದಾಗಲಿದ್ದಾರೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ಭಾನುವಾರ ಮಂಡ್ಯ ಜಿಲ್ಲೆಯ ನೂತನ ಸಂಸದ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲು ಮಾಜಿ ಸಚಿವ ಕೆ.ಸಿ.ನಾರಾಯಣಗೌಡರೊಂದಿಗೆ ಹೋಬಳಿ ಕೇಂದ್ರಗಳಲ್ಲಿ ಸಭೆ ನಡೆಸಿ ಮಾತನಾಡಿದರು.
ತಾಲ್ಲೂಕಿನ ಶೀಳನೆರೆ, ಸಂತೇಬಾಚಹಳ್ಳಿ, ಬೂಕನಕೆರೆ, ಕಸಬಾ, ಕಿಕ್ಕೇರಿ, ಅಕ್ಕಿಹೆಬ್ಬಾಳು ಹೋಬಳಿ ಕೇಂದ್ರಗಳಲ್ಲಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಮಂಡ್ಯ ಜನತೆ ಕಾಂಗ್ರೆಸ್ ಪಕ್ಷದ ಆಸೆ ಆಮಿಷಗಳಿಗೆ ಕಿವಿಗೊಡದೆ ಎರಡೂವರೆ ಲಕ್ಷಕ್ಕೂ ಹೆಚ್ಚು ಅಂತರದಲ್ಲಿ ಗೆಲ್ಲಿಸಿದ್ದಾರೆ. ಇದಕ್ಕೆ ಪೂರಕವಾಗಿ ನರೇಂದ್ರ ಮೋದಿಯವರು ಕುಮಾರಸ್ವಾಮಿರವರಿಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯಂತ ಮಹತ್ವದ ಖಾತೆ ನೀಡಿದ್ದಾರೆ. ಕೊಟ್ಟಿರುವ ಖಾತೆಯಲ್ಲಿ ಕುಮಾರಣ್ಣ ಪಾದರಸದಂತೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಇಂಬು ಕೊಡುವಂತೆ ಆಂಧ್ರಪ್ರದೇಶದ ವೈಜಾಗ್‍ನಲ್ಲಿರುವ ಉಕ್ಕು ಕಾರ್ಖಾನೆಯನ್ನು ಖಾಸಗಿ ಯವರ ಪಾಲಾಗದಂತೆ ಕೇಂದ್ರ ಸರ್ಕಾರದ ಅಡಿಯಲ್ಲಿ ಪ್ರಾರಂಭ ಮಾಡಿದ್ದಾರೆ. ಇನ್ನು ತಾಲ್ಲೂಕಿನಲ್ಲಿರುವ ರೈಲ್ವೆ ಯೋಜನೆಗೆ ನಾನು ಮನವಿ ಸಲ್ಲಿಸಿದಾಗ, ತಕ್ಷಣ ರೈಲ್ವೆ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳನ್ನು ಕಳಿಸಿ ಸ್ಥಳ ಪರಿಶೀಲನೆ ಮಾಡಿಸಿದ್ದಾರೆ. ಈ ತಿಂಗಳ 21 ನೇ ತಾರೀಖು ಕೆ.ಆರ್.ಪೇಟೆ ಪಟ್ಟಣದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ಬಿಜೆಪಿ-ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿದ್ದರಿಂದ ಇಂದು ಕುಮಾರಸ್ವಾಮಿರವರು ಅತಿಹೆಚ್ಚು ಮತಗಳಿಂದ ಗೆದ್ದು ಸಂಸದರಾದ ಫಲವಾಗಿ ಇಂದು ನರೇಂದ್ರ ಮೋದಿಯವರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದಾರೆ. ಇಂತಹ ಸಮಯದಲ್ಲಿ ನಮಗೂ ಕೂಡಾ ಸಂತಸವಾಗುತ್ತಿದೆ. ತಾಲ್ಲೂಕಿನಲ್ಲಿ ಕೈಗಾರಿಕೆಗಳ ನಿರ್ಮಾಣಕ್ಕಾಗಿ ಜಾಗ ಗುರುತಿಸಲಾಗಿದೆ, 03 ರಿಂದ 04 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುತ್ತಾರೆ ಎಂಬ ವಿಶ್ವಾಸವಿದೆ ಆದ್ದರಿಂದ ನಾವು ಈ ಸಭೆಯಲ್ಲಿ ಒಟ್ಟಿಗೆ ಸೇರಿ ಅಭಿನಂದನಾ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಂಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಹೆಚ್.ಕೆ.ಅಶೋಕ್, ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಜಾನಕಿರಾಮ್, ಬಿಜೆಪಿ ಪಕ್ಷದ ತಾಲ್ಲೂಕು ಅಧ್ಯಕ್ಷ ನಾಗರಾಜು, ಮೂಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್ ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ವಿವಿಧ ಹೋಬಳಿ ಅಧ್ಯಕ್ಷರಾದ ರವಿ, ನಂದೀಶ್, ಕಾಯಿಮಂಜೇಗೌಡ, ವಸಂತ್‍ಕುಮಾರ್, ಬಸವಲಿಂಗಪ್ಪ, ರಾಜ್ಯ ಮಾರಾಟ ಮಹಾಮಂಡಳಿಯ ನಿರ್ದೇಶಕ ಎಸ್.ಎಲ್.ಮೋಹನ್, ಜೆಡಿಎಸ್ ಮುಖಂಡ ಎ.ಆರ್.ರಘು, ಸೇರಿದಂತೆ ನೂರಾರು ಮೈತ್ರಿಪಕ್ಷಗಳ ಕಾರ್ಯಕರ್ತರು ಭಾಗವಹಿಸಿದ್ದರು.