ಮಕ್ಕಳಿಗೆ ಪಠ್ಯಪುಸ್ತಕ, ಬ್ಯಾಗ್, ನೀರಿನ ಬಾಟಲ್ ವಿತರಣೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.18: ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮನೆ ವಿಭಾಗದ ಶಾಲಾ ಮಕ್ಕಳಿಗೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜಮೀರ್ ಅಹ್ಮದ್ ಅವರು ಕೊಡುಗೆ ನೀಡಿದ ಪಠ್ಯಪುಸ್ತಕ, ಬ್ಯಾಗ್ ಹಾಗೂ ನೀರಿನ ಬಾಟಲ್ ಗಳನ್ನು ಮಕ್ಕಳ ಮನೆ ವಿಭಾಗದ ಅಧ್ಯಕ್ಷ ಎ.ಆರ್.ರಘು ವಿತರಣೆ ಮಾಡಿದರು.
ನಂತರ ಮಾತನಾಡಿ ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣ ಪಡೆಯಲು ಮೂಲಭೂತ ಸೌಕರ್ಯಗಳು ಬೇಕು. ನಮ್ಮ ಸರ್ಕಾರಿ ಶಾಲೆಗಳಲ್ಲಿ ದಾನಿಗಳ ಸಹಾಯದಿಂದ ಎಲ್ಲಾ ರೀತಿಯ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಈ ಎಲ್ಲಾ ಸೌಕರ್ಯಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣ ಪಡೆದುಕೊಂಡು ಉನ್ನತ ಹುದ್ದೆ ಅಲಂಕರಿಸುವ ಮೂಲಕ ತಮ್ಮ ಪೆÇೀಷಕರು ಮತ್ತು ತಾವು ಹುಟ್ಟಿ ಬೆಳೆದ ಊರಿಗೆ ಗೌರವ ತಂದುಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ಶಾಲಾ ಮುಖ್ಯ ಶಿಕ್ಷಕ ಜಿ.ಎನ್.ರವಿ ಮಾತನಾಡಿ ದಾನಿಗಳು ವಿದ್ಯಾರ್ಥಿಗಳಿಗೆ ಈ ರೀತಿಯ ವಸ್ತುಗಳನ್ನು ವಿತರಿಸುವುದರಿಂದ ವಿದ್ಯಾರ್ಥಿಗಳಿಗೆ ಅನೇಕ ರೀತಿಯಲ್ಲಿ ಅನುಕೂಲಗಳಾಗುತ್ತದೆ. ಖಾಸಗಿ ಶಾಲೆಗಳು ಮೀರಿಸುವಂತಹ ವಾತಾವರಣವೂ ನಿರ್ಮಾಣವಾಗುತ್ತದೆ ಇದೇ ರೀತಿಯಲ್ಲಿ ಗ್ರಾಮದ ಎಲ್ಲರೂ ಕೊಡುಗೆ ನೀಡುವತ್ತ ಮುಂದಾದರೆ ಸರ್ಕಾರಿ ಶಾಲೆಗಳು ಕೂಡ ಖಾಸಗಿ ಶಾಲೆಗಳನ್ನು ಮೀರಿಸುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಾನಿಗಳಾದ ಜಮೀರ್ ಅಹ್ಮದ್, ವಿಠಲ್ ರಾವ್, ಸಿ.ಈ.ಓ ಜ್ಞಾನೇಶ್, ರೈತ ಶಿಕ್ಷಣ ಇನ್ಸ್ಪೆಕ್ಟರ್ ಪ್ರಭಾಕರ್, ಸಮಿತಿ ಸದಸ್ಯರಾದ ಎ.ಸಿ.ಮಂಜೇಗೌಡ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸೈಯದ್ ಉಮ್ಮರ್ ಸೇರಿದಂತೆ ಹಲವರು ಹಾಜರಿದ್ದರು.