ಕೋಲಾರಕ್ಕೆ ಬರಲಿದೆ ಬುಲೆಟ್ ಟ್ರೈನ್
ಕೋಲಾರ,ಜು,೧೮-ಬೆಂಗಳೂರು-ಚೆನ್ನೈ ಹೆದ್ದಾರಿ ರಸ್ತೆಯ ಕಾರಿಡಾರ್ ಕಾಮಗಾರಿಗಳು ಮುಗಿದಿದ್ದು ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ. ಇದರ ಬೆನ್ನ ಹಿಂದೆಯೇ ಕೋಲಾರ ಜಿಲ್ಲೆಗೆ ಮತ್ತೊಂದು ಕೊಡುಗೆಯಾಗಿ ಚೆನ್ನೈ- ಬೆಂಗಳೂರು ಎಕ್ಸಪ್ರೆಸ್ ರೈಲ್ವೆ ಕಾರಿಡಾರ್ ಯೋಜನೆಯ ಬುಲೆಟ್ ಟ್ರೈನ್ ಕಾಮಗಾರಿಯೂ ಪ್ರಾರಂಭವಾಗಲಿದೆ.
ಈ ಬುಲೆಟ್ ಟ್ರೈನ್ ಮೈಸೂರು-ಬೆಂಗಳೂರು-ಕೋಲಾರ ಮಾರ್ಗವಾಗಿ ಚೆನ್ನೈಯನ್ನು ತಲುಪಲಿದೆ. ಕೇಂದ್ರ ಸರ್ಕಾರವು ರೈಲ್ವೆ ಇಲಾಖೆ ಮೂಲಕ ಭಾರತದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವಂತ ೭ ಅತಿವೇಗದ ರೈಲು ಕಾರಿಡಾರ್ ಯೋಜನೆಯಲ್ಲಿ ಕೋಲಾರ ಜಿಲ್ಲೆಯ ಮೂಲಕ ಹಾದು ಹೋಗುವ ಬುಲೆಟ್ ಟ್ರೈನ್ ಸಹ ಒಂದಾಗಿರುವುದು.
ಚೆನ್ನೈನಿಂದ ಮೈಸೂರಿಗೆ ೪೬೩ ಕಿ.ಮಿ. ಉದ್ದದ ಈ ರೈಲು ಮಾರ್ಗವು ಕೋಲಾರ ಜಿಲ್ಲೆಯ ಕೃಷಿ ಜಮೀನುಗಳ ನಡುವೆಯೇ ಹಾದು ಹೋಗಲಿದೆ. ಇದಕ್ಕಾಗಿ ಹೊಸ ರೈಲ್ವೆ ಮಾರ್ಗದ ಕಾಮಗಾರಿಯನ್ನು ಮಾಡಲಾಗುವುದು. ಇದರ ನಡುವೆ ಅಲ್ಲಲ್ಲಿ ಅವಶ್ಯಕ ಇರುವ ಕಡೆ ಮೇಲ್ ಸೇತುವೆ ಹಾಗೂ ಒಳ ಸೇತುವೆಗಳ ನಿರ್ಮಾಣದ ಅಗತ್ಯವಿರುತ್ತದೆ. ಈ ರೈಲು ಮಾರ್ಗದ ಮೊದಲ ಹಂತದಲ್ಲಿ ಚೆನ್ನೈ- ಬೆಂಗಳೂರು ನಡುವೆ ೩೦೬ ಕಿ.ಮಿ. ಬೆಂಗಳೂರಿನ ಬೈಯಪ್ಪನಹಳ್ಳಿವರೆಗೆ ಜಾರಿಗೊಳ್ಳಲಿದೆ. ಎರಡನೇ ಹಂತದಲ್ಲಿ ಬೆಂಗಳೂರು ಮತ್ತು ಮೈಸೊರು ನಡುವೆ ೧೫೭ ಕಿ,ಮಿ ಮಾರ್ಗವು ನಿರ್ಮಾಣ ಮಾಡಲಾಗುವುದು.
ಇದರ ಗರಿಷ್ಟ ವೇಗ ಮಿತಿ ಒಂದು ಗಂಟೆಗೆ ೩೫೦ ಕಿ.ಮಿ. ಒಳಗೊಂಡಿರುವ ಬುಲೆಟ್ ಟ್ರೈನ್ ೩೨೦ ಕಿ.ಮಿ. ವೇಗದಲ್ಲಿ ಸಂಚರಿಸುವಂತೆ ಬೆಂಗಳೂರು-ಮೈಸೂರು ನಡುವೆ ೧೫೭ ಕಿ.ಮಿ, ಮಾರ್ಗವನ್ನು ನಿರ್ಮಾಣ ಮಾಡಲಾಗುವುದು. ಈ ಟ್ರೈನ್ ಸರಾಸರಿ ವೇಗವು ೨೫೦ ಕಿ.ಮಿ. ಎಂದು ಅಂದಾಜಿಸಲಾಗಿದೆ.
ಚೆನ್ನೈ- ಮೈಸೂರು ನಡುವೆ ತಮಿಳು ನಾಡಿನ ಪೊನ್ನಮಲೈ, ಚಿತ್ತೂರು, ಕೋಲಾರ, ಹೊಸಕೋಟೆ ಸಮೀಪದ ಕೋಡಹಳ್ಳಿ,ವೈಟ್ ಪೀಲ್ಡ್, ಬೈಯಪ್ಪನಹಳ್ಳಿ ಎಲ್ಕೆಟ್ರಾನಿಕ್ ಸಿಟಿ ಕೆಂಗೇರಿ, ಮಂಡ್ಯಗಳಲ್ಲಿ ಮಾತ್ರ ನಿಲುಗಡೆ ಇದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.