ಹಿಂದೂ, ಮುಸ್ಲಿಂ ಬಾಂಧವ್ಯ ಬೆಸೆಯುವ ಮೊಹರಂ ಹಬ್ಬ
ವಿಜಯಪುರ.ಜು.೧೮- ಕಳೆದ ಹತ್ತು ದಿನಗಳ ಕಾಲ ನಡೆದ ೧೦ ದಿನದ ಪೂಜಾ ಕಾರ್ಯಕ್ರಮದೊಂದಿಗೆ ಹಿಂದೂ ಮುಸ್ಲಿಂ ಭಾವೈಕ್ಯದ ಮೊಹರಂ (ಬಾಬಯ್ಯನ) ಹಬ್ಬ ವಿಜೃಂಭಣೆಯಿಂದ ಭಕ್ತಿ ಪೂರ್ವಕವಾಗಿ ನಡೆಯಿತು.
ಕೊನೆಯ ದಿನವಾದ ಬುಧವಾರದಂದು ತಾಬೂಲ್ ನಲ್ಲಿ ಪಂಜಾ (ಹಸ್ತ)ಗಳನ್ನು ಇಟ್ಟುಕೊಂಡು ಪಟ್ಟಣದ ಎಲ್ಲಾ ಪ್ರಮುಖ ಬೀದಿಗಳಲ್ಲಿ ಅಬ್ದುಲ್ ಜಬಿ ಸಾಬ್ ವಂಶಸ್ಥರು, ಮುಜಾವರ್ ವಂಶಸ್ಥರು ಮೆರವಣಿಗೆ ನಡೆಸಿದರು.
ಹಸೇನ್ ಹಾಗೂ ಹುಸೇನ್ ಸಹೋದರರು ಇರಾಕ್‌ನ ಕರಬಲ್ಲ ಮೈದಾನದಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿದ ಸಂದರ್ಭದಲ್ಲಿನ ನೆನಪಿಗಾಗಿ ಈ ಕಾರ್ಯಕ್ರಮ ನಡೆದಿದ್ದು, ಇದು ಪ್ರಾರಂಭಗೊಂಡ ೧೩ ದಿನಗಳ ಕಾಲ ಈ ವಂಶಸ್ಥರುಗಳು ಕಡ್ಡಾಯವಾಗಿ ಮಾಂಸಾಹಾರ ವರ್ಜಿಸಿರುತ್ತಾರೆ. ಏಳು ದಿನ ಕುದುರೆಗಳ ಮೇಲೆ ಪಂಜಾ ಗಳನ್ನು ಇಟ್ಟು ಹುಲಿವೇಷ ಹಾಗೂ ಭೂತದ ವೇಷಗಳೊಂದಿಗೆ ಮೆರವಣಿಗೆ ನಡೆಸಿ, ೯ನೇ ದಿನ ಹಲಾವಿಯಲ್ಲಿ ಬೆಂಕಿ ಹಾಕಿ, ಜಲ್ದಿ ನಡೆಸಲಾಗುತ್ತದೆ. ಹಿಂದೂ ಹಾಗೂ ಮುಸ್ಲಿಮರು ತಮ್ಮ ಹರಕೆಗಳನ್ನು ಹೊತ್ತು ಬಂದು, ಪಂಜಾಗಳಿಗೆ ಪೂಜೆ ಸಲ್ಲಿಸಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಉರುವಲು ಹಾಗೂ ಉಪ್ಪನ್ನು ಹಲಾವಿ ಬೆಂಕಿಯಲ್ಲಿ ಹಾಕುತ್ತಾರೆ.
ಇದರ ಪ್ರಯುಕ್ತ ಗಾಂಧಿ ಚೌಕ, ಒಕ್ಕಲಿಗರ ಬೀದಿ ಹಾಗೂ ಗುರಪ್ಪನ ಮಠದಲ್ಲಿರುವ ಈ ವಂಶಸ್ಥರುಗಳು ವಿಶೇಷ ದೀಪಾಲಂಕಾರಗಳೊಂದಿಗೆ ಪಂಜಾ ಹಾಗೂ ತಾಬೂಲುಗಳನ್ನು ಮಂಗಳವಾರದಂದು ರಾತ್ರಿ ಇಟ್ಟು ವಿಶೇಷ ಪೂಜೆ ಸಲ್ಲಿಸಿ ಹರಕೆಗಳನ್ನು ಹೊತ್ತು ಬರುವ ಹಿಂದೂ ಮುಸ್ಲಿಂ ಬಾಂಧವರನ್ನು ಹರಸಿ ಅನ್ನಸಂತರ್ಪಣೆಯನ್ನು ನಡೆಸಿದ್ದರು.
ಹತ್ತನೇ ದಿನ ಮೂರು ಕಡೆಗಳ ತಾಬೂಲ್ ಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಮಕ್ಕಳಿಗೆ ಬರಬಹುದಾದ ಹಾಗೂ ಇರುವ ರೋಗಗಳು ವಾಸಿಯಾಗಲೆಂದು ಇಲ್ಲವೇ ಬಾರದಿರಲೆಂದು ತಾಬೂಲ್ನ ಕೆಳಗೆ ಹಿಂದೂ ಮುಸ್ಲಿಂ ಹಾದಿಯಾಗಿ ಎಲ್ಲಾ ಮಕ್ಕಳನ್ನು ಹಾಯಿಸುತ್ತಾರೆ. ನಂತರ ಮೆರವಣಿಗೆಯು ಪಟ್ಟಣದ ಹೊರವಲಯದ ಜಂಗ್ಲಿ ಪೀರ್ ಬಾಬಾ ದರ್ಗಾಗೆ ಹೋಗಿ ಅಲ್ಲಿ ವಿಸರ್ಜಿಸಿ ಪ್ರಸಾದಗಳನ್ನು ನೀಡುತ್ತಾರೆ.
ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ಎಂ. ಸತೀಶ್ ಕುಮಾರ್, ಮಾಜಿ ಸದಸ್ಯ ನಿಸಾರ್, ಇಮ್ರಾನ್ ಪಾಷಾ, ಶಾ ಫೈಸಲ್, ಸತ್ತಾರ್ ಸಾಬ್, ಖಾಜಾ ಸಾಬ್, ಮತ್ತಿತರರು ಭಾಗವಹಿಸಿದ್ದರು.