ವಿಜೃಂಭಣೆಯ ಲಕ್ಷ್ಮಿ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ
ವಿಜಯಪುರ.ಜು.೧೮-ಇಲ್ಲಿನ ಬಲಿಜಪೇಟೆಯಲ್ಲಿ ನೆಲೆಸಿರುವ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯವರ ೧೯ ನೇ ವರ್ಷದ ಕಲ್ಲುಗಾಲಿ ಬ್ರಹ್ಮರಥೋತ್ಸವ, ೬೪ ನೇ ವರ್ಷದ ಅಖಂಡ ಶ್ರೀರಾಮನಾಮ ಸಪ್ತಾಹ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರದಂದು ವಿಜೃಂಭಣೆಯಿಂದ ಜರುಗಿತು.
ಇದರ ಪ್ರಯುಕ್ತ ಮೂರು ದಿನಗಳಿಂದಲೂ ಕಲ್ಯಾಣೋತ್ಸವ, ಪಲ್ಲಕ್ಕಿ ಉತ್ಸವಗಳು ನಡೆದಿದ್ದು, ಬುಧವಾರದಂದು ಬೆಳಗ್ಗೆಯಿಂದಲೇ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಪ್ರಾರಂಭವಾಗಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪೂಲಂಗಿ ಸೇವೆ, ಅಖಂಡ ರಾಮ ನಾಮ ಸಪ್ತಾಹ, ಪೂರ್ಣಹುತಿ, ಶ್ರೀಮತ್ ಕಲ್ಯಾಣ ಮಹೋತ್ಸವ ದೊಂದಿಗೆ ೧೯ನೇ ವರ್ಷದ ಕಲ್ಲುಗಾಲಿ ಬ್ರಹ್ಮರಥೋತ್ಸವ ನಡೆದಿದ್ದು, ಇದರೊಂದಿಗೆ ಸದ್ಗುರು ಯೋಗಿನಾರೇಯಣ ಯತೀಂದ್ರರ ೧೭ ನೇ ವರ್ಷದ ಆರಾಧನಾ ಮಹೋತ್ಸವ, ಪಟ್ಟಣದ ಬಲಿಜ ಸಂಘದ ೪೧ ನೇ ವರ್ಷದ ವಾರ್ಷಿಕೋತ್ಸವವನ್ನು ಜರುಗಿಸಲಾಯಿತು.
ಹಳೆಯ ಟೌನ್ ಹಾಲ್ ವೃತ್ತದಿಂದ ಹೊರಟ ರಥವನ್ನು ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ಮಹಾದ್ವಾರದವರೆಗೂ ಎಳೆಯಲಾಯಿತು ಭಕ್ತರು ತೇರಿನ ಕಳಸಕ್ಕೆ ಹಣ್ಣುದವನ ಅರ್ಪಿಸಿದರು. ರಥೋತ್ಸವದ ಅಂಗವಾಗಿ ಗಾರ್ಡಿಗೊಂಬೆ, ಕೀಲು ಕುದುರೆ, ಗಾರ್ಡಿಗೊಂಬೆಗಳ ವೇಷಭೂಷಣ, ವೀರಗಾಸೆ, ಪಂಡರಾಪುರ ಭಜನೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬಲಿಜ ಸಂಘದ ಪ್ರದಾನ ಕಾರ್ಯದರ್ಶಿ ಸಿ,ಕೆ.ಜಗದೀಶ್, ಪುರಸಭಾ ಮಾಜಿ ಅಧ್ಯಕ್ಷರಾದ ಎಂ.ಸತೀಶ್ ಕುಮಾರ್, ರಾಜೇಶ್ವರಿ ಭಾಸ್ಕರ್, ಸದಸ್ಯರುಗಳಾದ ಸಿ.ಎಂ.ರಾಮು, ರಾಜಣ್ಣ, ಮಂಜುಳಾ ಮುನಿರಾಜು, ಮಾಜಿ ಸದಸ್ಯ ಬಲಮುರಿ ಶ್ರೀನಿವಾಸ್, ಕೇಬಲ್ ಸುರೇಶ್, ಬಲಿಜ ಸಂಘದ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಮಹಾತ್ಮಾಂಜನೇಯ, ಮಾಜಿ ಕಾರ್ಯದರ್ಶಿ ಮುನಿರಾಜು, ಪ್ರಕಾಶ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮತ್ತಿತರರು ಉಪಸ್ಥಿತರಿದ್ದರು. ಗೋವಿಂದ, ಗೋವಿಂದ ಜಯಘೋಷಗಳೊಂದಿಗೆ ರಥವನ್ನು ಎಳೆಯಲಾಯಿತು. ಗಾಣಿಗ ಸಂಘದ ಸದಸ್ಯರುಗಳು ಭಗವದ್ಗೀತಾ ಪಾರಾಯಣ ನಡೆಸುತ್ತಾ, ರಥದ ಹಿಂದೆ ಸಾಗಿದರು.