ಭದ್ರಾ ನೀರಾವರಿ ಸಲಹಾ ಸಮಿತಿ  ಸಭೆ ಕರೆಯಲು ರೈತ ಮುಖಂಡರಿಂದ ಡಿಸಿಗೆ ಮನವಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೭; ತಕ್ಷಣ ಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಸಭೆ ನಡೆಸಬೇಕು. ಭದ್ರಾ ಡ್ಯಾಂನಲ್ಲಿ ನೀರಿನ ಲಭ್ಯತೆಗೆ ಅನುಸಾರವಾಗಿ ನೀರು ಬಿಡುವ ನಿರ್ಧಾರ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ರೈತ ಮೊರ್ಚಾ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿಯವರಲ್ಲಿ ಮನವಿ ಸಲ್ಲಿಸಿದ್ದಾರೆ.ಈ ವೇಳೆ ರೈತ ಮುಖಂಡ ಬಿ.ಎಂ ಸತೀಶ್ ಮಾತನಾಡಿ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಪುನರ್ವಸು ಮಳೆ ಪುರುಸೊತ್ತು ಇಲ್ಲದೆ ಸುರಿಯುತ್ತಿದೆ. ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ರೈತರಲ್ಲಿ ಮಂದಹಾಸ ಮೂಡಿದೆ. ಕಳೆದ ಬೇಸಿಗೆ ಹಂಗಾಮಿನಲ್ಲಿ ಬೀಕರ ಬಿಸಿಲಿನ ತಾಪಮಾನದಿಂದ ಬಸವಳಿದ ರೈತರು ಪ್ರಸ್ತುತ ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಮೀನು ಉಳಿಮೆ ಮಾಡಿಕೊಂಡು ಭತ್ತದ ಬೀಜ ಬಿತ್ತನೆಗೆ ಸಜ್ಜಾಗಿ ಡ್ಯಾಂನ ಒಳಹರಿವಿನ ಪ್ರಮಾಣವನ್ನು ಚಾತಕ ಪಕ್ಷಿಯಂತೆ ನೋಡುತ್ತಿದ್ದಾರೆ.  ಭದ್ರಾ ಡ್ಯಾಂನ ಒಳಹರಿವು 27839 ಕ್ಯೂಸೆಕ್ ಇದ್ದು, ನೀರಿನ ಮಟ್ಟ 144 ಅಡಿ 7 ಇಂಚು ಇದೆ. 30.142 ಟಿ.ಎಂ.ಸಿ ಯಷ್ಟು ನೀರಿನ ಸಂಗ್ರಹ ಇದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುತ್ತದೆ. ಹೀಗಾಗಿ ಈ ಸಲ ಡ್ಯಾಂ ತುಂಬುತ್ತದೆ ಎಂದು ರೈತರಲ್ಲಿ ಭರವಸೆ ಮೂಡಿದೆ. ಇದರಿಂದ ದಾವಣಗೆರೆ ಜಿಲ್ಲೆಯಲ್ಲಿ 65847 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲು ಅಣಿಯಾಗುತ್ತಿದ್ದಾರೆ ಆದ್ದರಿಂದ ಸಭೆ ಕರೆಯಬೇಕು.ಸ್ಲೂಯಿಸ್ ಗೇಟ್ ಮೂಲಕ ನೀರು ಸೋರಿಕೆಯಾಗುತ್ತಿದೆ. ಸೋರಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸ್ಲೂಯಿಸ್ ಭದ್ರತೆ ಬಗ್ಗೆ ಸ್ಪಷ್ಟನೆ ನೀಡಬೇಕು. 1962ರಲ್ಲಿ ಗಾರೆ, ಸುಣ್ಣ ಮತ್ತು ಕಲ್ಲು ಬಳಸಿ ಭದ್ರಾ ಡ್ಯಾಂ ನಿರ್ಮಿಸಲಾಗಿದೆ. ಸಹಜವಾಗಿ ಡ್ಯಾಂನ ತಳಭಾಗದಲ್ಲಿ ನೀರು ಸೋರಿಕೆಯಾಗುತ್ತಿದೆ. ಈ ಸೋರಿಕೆ ತಡೆಗಟ್ಟಬೇಕು. ಹಳೆಯಾದಾಗಿರುವ ಡ್ಯಾಂ ಗೇಟ್ ಗಳನ್ನು ಸರಿಪಡಿಸಿ, ಗಟ್ಟಿಗೊಳಿಸಬೇಕು. ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿರುವ ಡ್ಯಾಂ ನಿರ್ವಹಣೆಯ ಕ್ರೇನ್ ಗಳನ್ನು ರೀ ಕಂಡೀಷನ್ ಮಾಡಿಸಬೇಕು. ಸೇತುವೆ ಬಳಿ ಆಗಾಗ ಕುಸಿಯುವ ತಡೆಗೋಡೆಗಳನ್ನು ಸರಿಪಡಿಸಿ, ಭದ್ರಗೊಳಿಸಬೇಕು.ಡ್ಯಾಂನ ಸುತ್ತಲೂ ಬೇಲಿ ನಿರ್ಮಿಸಿ ಸುಭದ್ರತೆ ಕಾಪಾಡಬೇಕು.ಡ್ಯಾಂನ ಸುರಕ್ಷತೆಯ ಮೇಲ್ವಿಚಾರಣೆ ನಡೆಸುವ ಕೇಂದ್ರದ ಜಲ ಆಯೋಗ ಡ್ಯಾಂನ ಪುನರುತ್ಥಾನ ಮತ್ತು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಡ್ಯಾಂನ ಸುರಕ್ಷತೆಗೆ ₹100 ಕೋಟಿಗಳ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಈ ₹100 ಕೋಟಿನ್ನು ಬಿಡುಗಡೆ ಮಾಡಲಾರದೆ, ಕರ್ನಾಟಕ ನೀರಾವರಿ ನಿಗಮದ ಮೂಲಕ ಕೇಂದ್ರ ಸರ್ಕಾರಕ್ಕೆ ಮೋರೆ ಹೋಗಿ ಸುಮ್ಮನೆ ಕೈಕಟ್ಟಿ ಕುಳಿತಿದೆ. ಇದು ಸರಿಯಲ್ಲ. ಡ್ಯಾಂನ ಉಳಿವಿಗಾಗಿ ₹100 ಕೋಟಿ ಬಿಡುಗಡೆ ಮಾಡಲಾರದಷ್ಟು ಬಡತನ ರಾಜ್ಯ ಸರ್ಕಾರಕ್ಕೆ ಬಂದಿಲ್ಲ. ಆದ್ದರಿಂದ ಈ ₹100 ಕೋಟಿಯನ್ನು ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿ, ಡ್ಯಾಂನ ಸುರಕ್ಷತೆ ಕಾಪಾಡಬೇಕು ಎಂದು ಮನವಿ ಮಾಡಿದರು.