ಗಾಂಧಿ ಜಯಂತಿ, ಮಾರ್ಗಸೂಚಿ ಬಿಡುಗಡೆ
ಬೆಂಗಳೂರು,ಸೆ.೨೮-ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ದಿ. ೨.೧೦.೨೦೨೪ ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ದಿ.೨.೧೦.೨೦೨೪ ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ೧೫೫ನೇ ಜಯಂತಿಯನ್ನು ಹಾಗೂ ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ೧೯೨೪ ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿಯವರು ವಹಿಸಿದ್ದರು, ಈ ಐತಿಹಾಸಿಕ ಘಟನೆಯ ಶತಮಾನೋತ್ಸವ ಸಂಭ್ರಮವನ್ನು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅರ್ಥಪೂರ್ಣವಾಗಿ, ಸಂಭ್ರಮಯುತವಾಗಿ ಮತ್ತು ವೈಶಿಷ್ಟ್ಯಪೂರ್ಣವಾಗಿ ಕೆಳಕಂಡಂತೆ ಕಡ್ಡಾಯವಾಗಿ ಆಚರಿಸಲು ಅಗತ್ಯ ಕ್ರಮಗಳನ್ನು ವಹಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಹಾಗೂ ರಾಜ್ಯದ ಎಲ್ಲಾ ಶಾಲೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ದಿ.೨.೧೦.೨೦೨೪ ರಂದು ಬೆಳಿಗ್ಗೆ ೯ ಗಂಟೆಗೆ ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಎಸ್.ಡಿ.ಎಂ.ಸಿಗಳ ಸಮ್ಮುಖದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಗೌರವಪೂರ್ವಕವಾಗಿ ಪುಷ್ಪನಮನ ಸಲ್ಲಿಸಬೇಕು.ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರ ಗೌರವಾರ್ಥ ಬಿಳಿ ಗಾಂಧಿ ಟೋಪಿಯನ್ನು ಸ್ವಯಂಪ್ರೇರಿತರಾಗಿ ಧರಿಸಬಹುದು.ಸಂಗ್ರಾಮದ ಐತಿಹಾಸಿಕ ಘಟನೆಗಳ ಕುರಿತು ಸ್ಮರಿಸುವುದು ಹಾಗೂ ದೇಶಪ್ರೇಮ, ಸ್ವಾತಂತ್ರ್ಯ, ಸಮಾನತೆ, ಶಾಂತಿ, ಅಹಿಂಸೆ, ಸತ್ಯನಿಷ್ಠೆ, ಪ್ರಾಮಾಣಿಕತೆ, ಶಿಸ್ತು, ಜಾತ್ಯಾತೀತತೆ, ಅಸ್ಪೃಶ್ಯತೆ ನಿವಾರಣೆ, ಸ್ವಚ್ಛತೆ, ಶ್ರಮದಾನ ಹಾಗೂ ತಂಬಾಕು ಮತ್ತು ಮಾದಕ ವಸ್ತುಗಳಿಂದ ದೂರವಿರುವುದು ಮುಂತಾದ ಆದರ್ಶ ತತ್ತ್ವಗಳ ಹಾಗೂ ಜೀವನ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಹಾಗೂ ಈ ತತ್ವಗಳನ್ನು ಹಾಗೂ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಕುರಿತು ಅರಿವು ಮೂಡಿಸುವುದು.
ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ೧೯೨೪ ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿಯವರು ವಹಿಸಿದ್ದು, ಈ ಐತಿಹಾಸಿಕ ಘಟನೆ ಶತಮಾನೋತ್ಸವನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಈ ಕುರಿತು ಹಾಗೂ ಮಹಾತ್ಮ ಗಾಂಧಿಯವರ ಜನ್ಮ ದಿನ ಅಕ್ಟೋಬರ್-೦೨ ರಂದು ಪ್ರತಿ ವರ್ಷ ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ವಿಶ್ವಸಂಸ್ಥೆಯಿಂದ ಆಚರಿಸಲಾಗುತ್ತಿರುವ ಬಗ್ಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದು.
ಮೇಲ್ಕಂಡ ಅಂಶಗಳ ಕುರಿತು ವಿದ್ಯಾರ್ಥಿಗಳಿಂದ ಭಾಷಣ ಮತ್ತು ನಾಟಕ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
೬. ಸದರಿ ದಿನದಂದು ಶ್ರಮದಾನವನ್ನು ಕೈಗೊಂಡು ಆಯಾ ಶಾಲೆಗಳ ಆವರಣ, ಸುತ್ತ-ಮುತ್ತ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳುವುದು. ಈ ಸಂದರ್ಭದಲ್ಲಿ ಅಗತ್ಯಾನುಸಾರ ಸ್ಥಳೀಯ ಸಂಸ್ಥೆಗಳ ಸಹಕಾರವನ್ನು ಪಡೆದುಕೊಳ್ಳುವುದು.
ಮಹಾತ್ಮ ಗಾಂಧಿಯವರ ಜಯಂತಿಯ ಮಹತ್ವವನ್ನು ಹಾಗೂ ತತ್ವಗಳನ್ನು ಮತ್ತು ಸಂದೇಶವನ್ನು ಸಾರ್ವಜನಿಕರಿಗೆ ವ್ಯಾಪಕವಾಗಿ ತಲುಪಿಸಲು ಆಯಾ ಊರಿನಲ್ಲಿ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ೬ ರಿಂದ ೧೦ನೇ ತರಗತಿಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ರಾಷ್ಟ್ರ ಧ್ವಜದೊಂದಿಗೆ, ರಾಷ್ಟ್ರ ಪ್ರೇಮವನ್ನು ಸಾರುವ ಘೋಷಣಾ ವಾಕ್ಯಗಳು ಉದ್ಧರಿಸುತ್ತಾ ೧ ಕಿ.ಮೀ ಗೆ ಕಡಿಮೆಯಿಲ್ಲದಂತೆ ಜಾಥಾವನ್ನು ನಡೆಸಬೇಕು ಹಾಗೂ ಕಡೆಯಲ್ಲಿ ಅಹಿಂಸೆಯನ್ನು ಪಾಲಿಸುವ ಬಗ್ಗೆ ಮತ್ತು ತಂಬಾಕು ಮತ್ತು ಮಾದಕ ವಸ್ತುಗಳಿಂದ ದೂರವಿರುವ ಕುರಿತಾದ ಪ್ರತಿಜ್ಞಾವಿಧಿಯನ್ನು ಕೈಗೊಳ್ಳಲು ಸೂಚಿಸಲಾಗಿದೆ.