ಭಗತ್ ಸಿಂಗ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.28: ಬ್ರಿಟಿಷ್ ವಸಾಹತುಶಾಹಿ ಮುಕ್ತ ಭಾರತ ಮಾಡಲು ಕ್ರಾಂತಿ ಹೆಜ್ಜೆ ಇಟ್ಟ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಭಗತ್ಸಿಂಗ್ ಅವರ 117ನೇ ಜಯಂತಿಯಲ್ಲಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಭಗತ್ಸಿಂಗ್, ರಾಜಗುರು ಹಾಗೂ ಸುಖ್ದೇವ್ ಅಪ್ಪಟ ದೇಶಾಭಿಮಾನಿಗಳಾಗಿದ್ದರು.
ಪಂಜಾಬಿನ ಕೇಸರಿ ಲಾಲಾ ಲಜಪತ್ ರಾಯ್ ಸಾವಿಗೆ ಕಾರಣರಾದ ಬ್ರಿಟಿಷರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸನ್ ಮೇಲೆ ಗುಂಡುಹಾರಿಸಿ ಕೊಂದು ಬ್ರಿಟಿಷ್ ಪಾಲಿಗೆ ಸಿಂಹಸ್ವಪ್ನರಾಗಿ ಆ ನಿಮಿತ್ತ ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಲ್ಪಟ್ಟರು.
ಹೋರಾಟ ಸದಾ ಚಿರಾಯುವಾಗಿರಲಿ ಎಂದು ಕನಸುಕಂಡು ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆ ಹುಟ್ಟು ಹಾಕಿ,ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದರು.
ಆದ್ದರಿಂದ ವಿದ್ಯಾರ್ಥಿಗಳು ಭಗತ್ಸಿಂಗ್ ಅವರ ಆದರ್ಶ ಮೈಗೂಡಿಸಿಕೊಂಡು ಅವರಂತೆ ದೇಶ ಪ್ರೇಮಿಗಳಾಗಬೇಕೆಂದು ಹೇಳಿದರು.
ಕನ್ನಡ ಶಿಕ್ಷಕಿ ಶ್ವೇತಾ ಭಗತ್ಸಿಂಗ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರೆ,ಎಂ.ಎಂ.ಚನ್ನಮ್ಮ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಶಿಕ್ಷಕರಾದ ಸುಮತಿ, ಉಮ್ಮೆಹಾನಿ, ಶಶಮ್ಮ, ರಾಮಾಂಜನೇಯ, ಗುರುಪ್ರಸಾದ್, ವಿಜಯ ಮುಂಡ್ರಿಗಿ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಕೆ.ಎಸ್. ಅನುಷ, ಸುಮ ಪುಷ್ಪ ನಮನ ಸಲ್ಲಿಸಿದರು. ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.