ಬೀದಿ ನಾಯಿಗಳಿಗೆ ಆಹಾರ ಹೊಸ ಯೋಜನೆ ಜಾರಿಗೆ ಕ್ರಮ
ಬೆಂಗಳೂರು,ಸೆ.೨೩:ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ಸಿಗದಂತಹ ಪ್ರದೇಶದಲ್ಲಿ ಆಹಾರದ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಪಾಲಿಕೆಯ ಪಶುಸಂಗೋಪನಾ ವಿಭಾಗದಿಂದ ಪ್ರಾಯೋಗಿಕವಾಗಿ ಹೊಸ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಪಶುಸಂಗೋಪನಾ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿದ್ದಾರೆ.
ನಗರದಲ್ಲಿ ಅನೇಕ ಸ್ಥಳಗಳಲ್ಲಿ ಸಮುದಾಯ ಪ್ರಾಣಿಗಳಿಗೆ ದಿನಕ್ಕೆ ಒಂದು ಹೊತ್ತಿನ ಆಹಾರವೂ ಸಹ ಸಿಗದಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ. ಇದರಿಂದ ಬೀದಿ ನಾಯಿಗಳು ಆಕ್ರಮಣಕಾರಿಯಾಗಿ ವರ್ತಿಸುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಬೀದಿ ನಾಯಿಗಳು ಸಾರ್ವಜನಿಕರಿಗೆ ಕಚ್ಚುವ ಪ್ರಕರಗಳು ಕಂಡಬರುತ್ತಿದ್ದು, ಅದನ್ನು ನಿಂಯಂತ್ರಿಸಬೇಕಿದೆ.
ಆದ್ದರಿಂದ ನಾಯಿಗಳಿಗೆ ಸರಿಯಾಗಿ ಆಹಾರ ಸಿಗುವಂತೆ ಮಾಡಲು ಪಾಲಿಕೆಯು ಪ್ರಾಣಿ ಪಾಲಕರು, ಪೌರಕಾರ್ಮಿಕರು, ಹೋಟೆಲ್ ಮಾಲಿಕರು, ಆರೋಗ್ಯ ವಿಭಾಗದ ಸಿಬ್ಬಂದಿ ಹಾಗೂ ಇತರೆ ಆಸಕ್ತರೊಂದಿಗೆ ಸಮನ್ವಯ ಸಾಧಿಸಿ ಇದನ್ನು ಮಾಡಲಾಗುವುದು ಎಂದರು.ಪ್ರಾಣಿಗಳಿಗೆ ಆಹಾರ ನೀಡುವ ಪ್ರಾಣಿ ಪ್ರಿಯರ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ನಂತರ ಪೌರ ಕಾರ್ಮಿಕರು ಮತ್ತು ಖಾಸಗಿ ಹೋಟೆಲ್ ಮಾಲಿಕರನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಿ ಆಹಾರ ನೀಡುವ ಸ್ಥಳಗಳನ್ನು ಗುರುತಿಸಿ ಬೀದಿ ನಾಯಿಗಳಿಗೆ ಸರಿಯಾಗಿ ಆಹಾರ ಸಿಗುವಂತೆ ಮಾಡುವುದು. ಅದಾದ ಬಳಿಕ ಈ ಅಭಿಯಾನವನ್ನು ಪ್ರಾಯೋಗಿಕವಾಗಿ ಆಯ್ದ ಸ್ಥಳಗಳಲ್ಲಿ ಅನುಷ್ಟಾನಗೊಳಿಸಿ ಎಲ್ಲಾ ಪಾಲುದಾರರ ಪ್ರತಿಕ್ರಿಯೆಯನ್ನು ಸಂಗ್ರಹಿಸಲಾಗುವುದು. ಯೋಜನೆ ಯಶಸ್ವಿಯಾದಲ್ಲಿ ಪಾಲಿಕೆಯ ಎಲ್ಲಾ ವಾರ್ಡ್‌ಗಳಲ್ಲಿ ಈ ಅಭಿಯಾನವನ್ನು ಅನುಷ್ಠಾನಗೊಳಿಸುವುದು ಎಂದು ತಿಳಿಸಿದ್ದಾರೆ.
ಸಮುದಾಯದ ಪ್ರಾಣಿಗಳಿಗೆ ಉತ್ತಮ ಸಹಾಯ ಮಾಡಲು ಕೇರ್‌ಟೇಕರ್‌ಗಳನ್ನು ಬಲಪಡಿಸುವುದರ ಜೊತೆಗೆ, ಪ್ರಾಣಿಗಳ ಸಂರಕ್ಷಣೆ ಕಾರ್ಯಾಚರಣೆ ಹಾಗೂ ಶಸ್ತ್ರಚಿಕಿತ್ಸಾ ನಂತರದ ಆರೈಕೆ, ವೈದ್ಯಕೀಯ ಮೇಲ್ವಿಚಾರಣೆಗೆ ಅಗತ್ಯವಿರುವ ಸಂದರ್ಭಗಳಲ್ಲಿ ಪ್ರತ್ಯೇಕ ವಲಯಗಳಲ್ಲಿ ರಕ್ಷಣೆ ಮತ್ತು ಚೇತರಿಸಿಕೊಳ್ಳುವಿಕೆಯನ್ನು ಬೆಂಬಲಿಸುವ ಸಾಮರ್ಥ್ಯವನ್ನು ಪಾಲಿಕೆ ನಿರ್ಮಿಸುತ್ತಿದೆ. ಈ ಕುರಿತು ವಿವರವಾದ ಯೋಜನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು.