ಸಂಸ್ಥೆ ಕಟ್ಟುವವರು ಆರಂಭಶೂರತ್ವ ಮೆರೆಯಬಾರದು
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೮; ನಗರದ ಸದ್ಯೋಜಾತ ಹಿರೇಮಠದಲ್ಲಿ ‘ಅನಂತ ಚೇತನ ಪರಿವಾರ’ ಸಂಘಟನೆಯ ಉದ್ಘಾಟನಾ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹರಿಹರ ಎಂಕೆಇಟಿ ಶಾಲೆಯ ಡೀನ್ ಡಾ. ಬಿ.ಟಿ. ಅಚ್ಯುತ್ ‘ಅನಂತ ಚೇತನ ಪರಿವಾರ’ ವನ್ನು ಉದ್ಘಾಟಿಸಿ ಮಾತನಾಡಿ, ಜೀವನೋತ್ಸಾಹ ಚಿರವಾಗಿರಬೇಕೆಂದರೆ ಇತರರನ್ನು ಖುಷಿಯಾಗಿ ಇಡುವಂತಹ ಕಾರ್ಯವನ್ನು ಸದಾ ತೊಡಗಿಸಿಕೊಳ್ಳಿರಿ. ಒಂದಿಲ್ಲೊಂದು ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿರಿ. ನಮ್ಮ ಏಳಿಗೆಯನ್ನು ಸಹಿಸದೆ ಕರುಬುವವರೇ ಹೆಚ್ಚು. ಅಂತಹವರನ್ನು ಕಡೆಗಣಿಸಿ, ನಿಮ್ಮಷ್ಟಕ್ಕೆ ನೀವು ಮುಂದೆ ಸಾಗಿರಿ ಎಂದು ಸಲಹೆ ನೀಡಿದರು.ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಕಲಾಕುಂಚ ಸಂಸ್ಥಾಪಕ ಗಣೇಶ್ ಶೆಣೈ ಮಾತನಾಡಿ, ಸಂಸ್ಥೆ ಕಟ್ಟುವವರು ಆರಂಭಶೂರತ್ವ ಮೆರೆಯಬಾರದು. ಅದನ್ನು ನಿರಂತರವಾಗಿ, ಕ್ರಿಯಾಶೀಲವಾಗಿ ನಡೆಸಿಕೊಂಡು ಹೋಗಬೇಕು. ಹೊಟ್ಟೆ ಪಾಡಿಗಾಗಿ ದುಡಿಯುವುದು ಸಾಮಾನ್ಯ. ಅದರ ಜೊತೆ ಜೊತೆಗೆ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಳ್ಳಬೇಕು. ಸಮಾಜ ಸೇವೆ ಮಾಡಿದರೆ ಜೀವನಕ್ಕೆ ಸಾರ್ಥಕ್ಯ ಬರಲಿದೆ ಎಂದರು.ಪರಿವಾರದ ಸಂಸ್ಥಾಪಕಿ ಡಾ. ಆರತಿ ಸುಂದರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚೈತನ್ಯ ಎಂಬುದು ಒಂದು ದಿನಕ್ಕೆ ಸೀಮಿತವಾಗಿದೆ, ಜೀವನದ ಕೊನೆಯವರೆಗೂ ಇರಬೇಕು. ಎಲ್ಲರಿಗೂ ಜೀವನದ ಬಗ್ಗೆ ಒಲವಿರಬೇಕು. ನಮ್ಮೆಲ್ಲರಲ್ಲಿ ಜೀವನೋತ್ಸಾಹ ಚಿರವಾಗಿರಲೆಂದೇ ಅನಂತ ಪರಿವಾರವನ್ನು ಆರಂಭಿಸಿದ್ದೇವೆ. ಎಲ್ಲರೂ ಒಂದಾಗಿ ಪಾಲ್ಗೊಳ್ಳಿರಿ ಎಂದರು. ಕಾರ್ಯಕ್ರಮದಲ್ಲಿ ಪರಿವಾರದ ಅಧ್ಯಕ್ಷೆ, ಸುಮಾ ಸದಾನಂದ್, ಪ್ರಧಾನ ಕಾರ್ಯದರ್ಶಿ ನೀಲಮ್ಮ ಬೆಳ್ಳೂಡಿ, ಖಜಾಂಚಿ ಚೇತನ ಚಿದಂಬರಂ, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಪರಿವಾರ ಸದಸ್ಯರು ಭಾಗವಹಿಸಿ ದ್ದರು.ಆರಂಭದಲ್ಲಿ ಭವಾನಿ ಶಂಭುಲಿಂಗಪ್ಪ ಪ್ರಾರ್ಥಿಸಿದರು. ಪುಟಾಣಿ ಮಾನ್ವಿತ ಗಣೇಶನನ್ನು ಸ್ತುತಿಸಿದರು. ವಾತಾಪಿ ಗಣಪತಿ ಸ್ತುತಿಗೆ ನವ್ಯ ರಾಯ್ಕರ್ ನೃತ್ಯ ಪ್ರದರ್ಶಿಸಿದರು. ಸುನಂದಾ, ಉಷಾ ಲಿಂಗರಾಜ್ ಹಾಗೂ ಉಮಾ ಯಲ್ಲಪ್ಪ ಪರಿಸರ ಗೀತೆ ಹಾಡಿದರು. ಸುಮಾ ಸದಾನಂದ ಸ್ವಾಗತಿಸಿದರು. ಸರಳ ಶಾಂತಿನಾಥ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಬಹುಮಾನ ವಿತರಣೆ ಕಾರ್ಯಕ್ರಮವನ್ನು ಚಂದನ ವಿಜಯಕುಮಾರ್ ನಡೆಸಿಕೊಟ್ಟರು. ಸುಕನ್ಯಾ ಬೆಳ್ಳೂಡಿ ನಿರೂಪಿಸಿದರು. ಶಾಂತಾ ತಿಪ್ಪಣ್ಣ  ವಂದಿಸಿದರು.