ಹಿಂದೂ ಮುಸ್ಲಿಂ ಬಾಂಧವರಿಂದ ಮೊಹರಂ ಹಬ್ಬದಲ್ಲಿ ಭಾವೈಕ್ಯತೆಯ ಸಂಗಮ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧೮; ಮೊಹರಂ ಹಬ್ಬವೆಂದರೆ ಅದು ಕೇವಲ ಮುಸ್ಲಿಮರು ಆಚರಿಸುವ ಹಬ್ಬವಾಗಿ ಎಂದಿಗೂ ಉಳಿದಿಲ್ಲ. ಹಿಂದೂಗಳು ಸಹ ಅಲೆ ದೇವರಿಗೆ ಸಕ್ಕರೆ ನೈವೇದ್ಯ ಮಾಡಿಕೊಂಡು ಬಂದು, ಅಲೆಗುಣಿ ಸುತ್ತಿ ಭಕ್ತಿ ಸಮರ್ಪಿಸುವ ಮೂಲಕ ಹಿಂದೂ ಮುಸ್ಲಿಂರು ಆಚರಿಸುವ ಭಾವೈಕ್ಯತೆ ಸಾರುವ ಹಬ್ಬವಾಗಿ ಉಳಿದಿದೆ. ಆದರೆ, ತಾಲ್ಲೂಕಿನ ಹಳೇ ಕುಂದುವಾಡ ಗ್ರಾಮದಲ್ಲಿ ಈ ಬಾರಿ ಆಂಜನೇಯ ಸ್ವಾಮಿಯೂ ಸಹ ಮೊಹರಂನಲ್ಲಿ ಪಾಲ್ಗೊಂಡಿರುವುದು ವಿಶೇಷ.!ಅರೇ ಇದೇನಿದು ಆಂಜನೇಯ ಸ್ವಾಮಿ ಮೊಹರಂ ಆಚರಣೆಯಲ್ಲಿ ಪಾಲ್ಗೊಳ್ಳಲು ಹೇಗೆ ಸಾಧ್ಯವೆಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುಸು ಸಹಜ. ಆದರೆ, ಹಳೆ ಕುಂದುವಾಡದಲ್ಲಿ ಈಚೆಗಷ್ಟೇ ಮಸೀದಿಯಲ್ಲಿ ದೇವರ ಕಳ್ಳತನವಾಗಿತ್ತು. ಆಗ ಮುಸ್ಲಿಂ ಮುಖಂಡರೆಲ್ಲಾ ಸೇರಿ ಅಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದೇವರ ಹೇಳಿಕೆ ಕೇಳಿದಾಗ ಆಂಜನೇಯ ಸ್ವಾಮಿಯು ಶೀಘ್ರದಲ್ಲಿಯೇ ದೇವರುಗಳು ಸಿಗುತ್ತವೆ ನೀವು ನಿರಾತಂಕವಾಗಿ ಮೊಹರಂ ಆಚರಿಸಬಹುದೆಂದು ಹೇಳಿಕೆ ನೀಡಿತ್ತು.