ಬೀಜೋತ್ಪಾದನೆ, ಕೃಷಿ ಸಂಶೋಧನೆ ಸಂಸ್ಥೆಗಳಿಗೆ ಕೃಷಿ ವಿಜ್ಞಾನಿ ಎ.ಎಸ್. ಪಾಟೀಲ್ ಹೆಸರಿಡಲು ಒತ್ತಾಯ
ಕಲಬುರಗಿ:ಜು.17: ಖ್ಯಾತ ಕೃಷಿ ವಿಜ್ಞಾನಿ ಜೇವರ್ಗಿಯ ಬಿರಾಳದ ಶರಣಗೌಡ ಪಾಟೀಲ್ ಅವರು ಕೃಷಿ ರಂಗದಲ್ಲಿ, ರೈತರಿಗಾಗಿ ತಮ್ಮ ಜೀವನದುದ್ದಕ್ಕೂ ಮಾಡಿರುವ ಸಾಧನೆ ಸದಾ ಸ್ಮರಣೀಯವಾಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಾಗಬೇಕು. ಜೇವರ್ಗಿಯ ರದ್ದೇವಾಡಗಿಯಲ್ಲಿರುವ ಬೀಜೋತ್ಪಾದನೆ ಕೇಂದ್ರ ಅಥವಾ ಕಲಬುರ್ಗಿಯಲ್ಲಿರುವ ಕೃಷಿ ಕಾಲೇಜು, ಕೃಷಿ ವಿಜ್ಞಾನ ಸಂಶೋಧನೆ ಕೇಂದ್ರಗಳಲ್ಲಿಯಾವುದಾದರೂ ಒಂದಕ್ಕೆ ಕೃಷಿ ಸಾಧಕ ಪಾಟೀಲ್ ಅವರ ಹೆಸರಿಡಬೇಕು ಎಂದು ಹೋರಾಟಗಾರರು, ವೀರಶೈವ ಲಿಂಗಾಯತ ಸಮಾಜಯುವ ಮುಖಂಡರು, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಎಂ.ಎಸ್. ಪಾಟೀಲ್ ನರಿಬೋಳ್ ಅವರು ಒತ್ತಾಯಿಸಿದ್ದಾರೆ.
ಪಾಟೀಲ್ ಅವರು ಕಲಬುರ್ಗಿಯಷ್ಟೇ ಅಲ್ಲ ಇಡೀ ಕರುನಾಡಿನ ಹೆಮ್ಮೆಯ ಕುವರರು. ಅವರ ಕೃಷಿ ರಂಗದಲ್ಲಿ ಹತ್ತಿ, ಎಣ್ಣೆಕಾಳು ಬೀಜಗಳ ಂಸಶೋಧನೆಯಂತೂ ಜಾಗತಿಕವಾಗಿ ಹೆಸರಾಗಿತ್ತು. ಹೀಗಾಗಿ ಪಾಟೀಲರ ರೈತಪರ ಕೆಲಸಗಳು ಸದಾಕಾಲ ಎಲ್ಲರಿಗೂ ನೆನಪಾಗಬೇಕು. ಯುವಕರು ಪಾಟೀಲರಿಂದ ಪ್ರೇರಣೆ ಪಡೆದು ಮತ್ತೆ ಕೃಷಿ ಓದಿಗೆ, ಅಧ್ಯಯನಕ್ಕೆ, ಕೃಷಿ ಪದವೀಧರರು ಹೊಲಗದ್ದೆಗಳತ್ತ ಮುಖ ಮಾಡುವಂತಾಗಬೇಕು. ಅದಕ್ಕೆಲ್ಲ ಪಾಟೀಲರ ಸಾಧನೆ ಪ್ರೇರಣೆಯಾಗಬೇಕು. ಅವರ ಹೆಸರು ಈ ಕೃಷಿ ಸಂಬಂಧಿ ಸಂಸ್ಥೆಗಳಿಗೆ ಇಡುವ ಮೂಲಕ ಸರ್ಕಾರಗಳು ಜನಪರ ಕೆಲಸ ಮಾಡಲಿ ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಈ ಸಂಬಂಧ ತಾವು ಶೀಘ್ರದಲ್ಲೇ ರಾಜ್ಯದ ಕೃಷಿ ಸಚಿವರು, ಕೇಂದ್ರ ಸರ್ಕಾರದ ಕೃಷಿ ಅನುಸಂಧಾನ ಪರಿಷತ್ತು, ಕಲಬುರ್ಗಿಸಂಸದರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ನರಿಬೋಳ್ ಅವರು ತಿಳಿಸಿದ್ದು, ಸರ್ಕಾರ ತಕ್ಷಣ ಬೇಡಿಕೆಗೆ ಸ್ಪಂದಿಸಬೇಕು. ಅಲಕ್ಷತನ ತೋರಿದರೆ ಸುಮ್ಮನಿರೋದಿಲ್ಲವೆಂದು ಎಚ್ಚರಿಸಿದ್ದಾರೆ.