ಗ್ಯಾರಂಟಿಗಳಿಗೆ ಪರಿಶಿಷ್ಟರ ಹಣ ಬಳಕೆ ವಿರೋಧಿಸಿ ಜು. 21ರಂದು ಬೃಹತ್ ಪ್ರತಿಭಟನಾ ಮೆರವಣಿಗೆ
ಕಲಬುರಗಿ:ಜು.17: ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಬಳಕೆ ಮಾಡಬಾರದು ಎಂದು ಒತ್ತಾಯಿಸಿ ಇದೇ ಜುಲೈ 22ರಂದು ಬೆಳಿಗ್ಗೆ 11 ಗಂಟೆಗೆ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕೂಡಲೇ ಗ್ಯಾರಂಟಿ ಯೋಜನೆಗಳ ವೆಚ್ಚವನ್ನು ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿಗೆ ಮೀಸಲಾದ ಮೊತ್ತದಿಂದ ಭರಿಸುವ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿವಿದೋದ್ದೇಶಗಳಿಗೆ ಬಳಸಲು ಅವಕಾಶ ನೀಡುತ್ತಿದ್ದು, ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಕಾಯ್ದೆ 2013ರ ಸೆಕ್ಷನ್ ಏಳು(ಡಿ) ಕಾಲಂನ್ನು ರದ್ದುಮಾಡಲು ತೀರ್ಮಾನಿಸುವುದನ್ನು ಬಜೆಟ್‍ನಲ್ಲಿ ಘೋಷಿಸಿದೆ. ಸೆಕ್ಷನ್ 7(ಸಿ) ಅಡಿಯಲ್ಲಿನ ಕಾರಣಕ್ಕೆ ಸಾವಿರಾರು ಕೊಟಿ ರೂ.ಗಳು ಇತರೆ ಸಾರ್ವಜನಿಕ ಕೆಲಸಗಳಿಗೆ ಬಳಸಲು ಅವಕಾಶ ಇರುತ್ತದೆ. ಇದರಿಂದ ಪರಿಶಿಷ್ಟ ಸಮುದಾಯಗಳಿಗೆ ಆಗುತ್ತಿದ್ದ ಅನ್ಯಾಯವನ್ನು ರದ್ದುಪಡಿಸಲು ಮತ್ತು ಎಸ್‍ಸಿಎಸ್‍ಪಿ ಮತ್ತು ಟಿಪಿಎಸ್‍ಗೆ ಮೀಸಲಿಟ್ಟ ಹಣ ಗ್ಯಾರಂಟಿಗಳಿಗೆ ಬಳಸಬಾರದು ಎಂದು ಅವರು ಒತ್ತಾಯಿಸಿದರು.
ಲೋಕಸಭಾ ಚುನಾವಣೆಯ ನಂತರ ಕನಾಟಕ ಸರ್ಕಾರದ ಕ್ರಮಗಳು ಕೇಂದ್ರದ ಮೋದಿ ಸರ್ಕಾರದ ನಕಲಿನಂತೆ ಇವೆ ಎಂದು ಆರೋಪಿಸಿದ ಅವರು, ದಲಿತ, ಹಿಂದುಳಿದವರ, ಅಲ್ಪಸಂಖ್ಯಾತರ ಮತಗಳನ್ನು ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಕರ್ನಾಟಕ ರಾಜ್ಯದ ಬಜೆಟ್ ಗಾತ್ರ 3.5 ಲಕ್ಷ ಕೋಟಿ ರೂ.ಗಳು. ಅದರಲ್ಲಿ ಬಡಜನರ ಕಲ್ಯಾಣಕ್ಕಾಗಿ 52,000 ಕೋಟಿ ರೂ.ಗಳನ್ನು ಎತ್ತಿಡುವುದು ಸಮಸ್ಯೆ ಅಲ್ಲ. ಬಿಜೆಪಿ ಸರ್ಕಾರದ ಕಾಲದಲ್ಲಿ ನಡೆದ ಶೇಕಡಾ 40ರಷ್ಟು ಮೀರಿದ ಆಡಳಿತ ಭ್ರಷ್ಟಾಚಾರವನ್ನು ನಿಗ್ರಹಿಸಿದರೆ ಸಾಕು, ಗ್ಯಾರಂಟಿಗೆ ಬೇಕಿರುವ ಹಣ ಹೊರಡುತ್ತದೆ. ಇದಲ್ಲದೇ ಸೋರಿಕೆಯ ತಡೆ, ರಾಜ್ಯದ ಸಂಪನ್ಮೂಲಗಳ ದಕ್ಷ ತೆರಿಗೆ ಸಂಗ್ರಹ, ಆರ್ಥಿಕತೆಯ ಬೆಳವಣಿಗೆಯನ್ನು ಇತ್ಯಾದಿ ಮೂಲಕ ಗ್ಯಾರಂಟಿಗಳಿಗೆ ಬೇಕಿರುವ ಸಂಪನ್ಮೂಲಗಳನ್ನು ಸಂಗ್ರಹಿಸಲಾಘುವುದು. ಈ ವೆಚ್ಚದಿಂದ ಅಭಿವೃದ್ಧಿ ವೆಚ್ಚಗಳಿಗೆ ಯಾವುದೇ ತಡೆಯು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಘೋಷಿಸದ್ದು ಹುಸಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿಗಳಿಗೆ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಹಣ ಬಳಕೆಯ ಕುತಂತ್ರ ಹಿಂದಿನ ಮತ್ತು ಇಂದಿನ ಸರ್ಕಾರದಲ್ಲಿ ನಡೆದಿದೆ. ಇತ್ತೀಚಿನ ಸಚಿವ ಸಂಪುಟದಲ್ಲಿ ಸರ್ಕಾರ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿಗೆ ನಿಗದಿಯಾದ 39121 ಕೋಟಿ ರೂ.ಗಳ ಮೊತ್ತದಲ್ಲಿ 14282 ಕೋಟಿ ರೂ.ಗಳನ್ನು ಗ್ಯಾರಂಟಿಯ ಮೂಲಕ ವ್ಯಯ ಮಾಡಲು ತೀರ್ಮಾನಿಸಿದೆ. 2023ರಲ್ಲೂ ಕೂಡ ಸರ್ಕಾರ ಇದೇ ರಈತಿ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿಗೆ ಸೇರಿದ 11,000 ಕೋಟಿ ರೂ.ಗಳನ್ನು ಗ್ಯಾರಂಟಿ ನಿರ್ವಹಿಸಲು ವರ್ಗಾಯಿಸಿಕೊಂಡಿತ್ತು. ಆಗ ಸರ್ಕಾರ ಪರಿಶಿಷ್ಟ ಸಮುದಾಯಗಳ ಗ್ಯಾರಂಟಿ ವೆಚ್ಚವನ್ನು ಮಾತ್ರ ಇದರಿಂದ ಭರಿಸಲಾಗುವುದು ಎಂದು ಸಬೂಬು ಕೊಡುತ್ತದೆ. ಸರ್ಕಾರ ಪರಿಶಿಷ್ಟ ಸಮುದಾಯಗಳಿಗೆ ಎರಡು ಬಗೆಯ ವಂಚನೆಯನ್ನು ಮಾಡುತ್ತಿದೆ. ಇತರೆ ವೆಚ್ಚಗಳಿಗೆ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಹಣ ವರ್ಗಾವಣೆ ಅಪರಾಧ ಎಂಬ ನಿಯಮ ಸರ್ಕಾರ ಹೇಳುತ್ತದೆ ಎಂದು ಅವರು ಹೇಳಿದರು.
ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆಗಳ ಒಟ್ಟು ಸಮಾಜದ ಬಡತನ ನಿವಾರಣಾ ಯೋಜನೆಗಳ ಭಾಗವಲ್ಲ. ಸರ್ಕಾರವು ರೂಪಿಸುವ ಇತರ ಬಡತನ ನಿರ್ಮೂಲನೆ ಯೋಜನೆಗಳು ಶ್ರೇಣಿಕೃತ ಸಮಾಜದಲ್ಲಿ ಸಾಮಾಜಿಕ ತಾರತಮ್ಯಗಳ ಕಾರಣಗಳಿಂದಾಗಿ ಪರಿಶಿಷ್ಟ ಸಮುದಾಯಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ವಿಷಯದಲ್ಲಿ ಸರ್ಕಾರ ಕೊಡುತ್ತಿರುವುದು ಮತ್ತೊಂದು ಸಮರ್ಥನೆ ಪರಿಶಿಷ್ಟರ ಗ್ಯಾರಂಟಿ ವೆಚ್ಚಕ್ಕೆ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿಯಿಂದ ಹಣ ಬಳಸಲಾಗುತ್ತದೆ ಎನ್ನುವುದು ಈಗಾಗಲೇ ಗ್ಯಾರಂಟಿಗಳಿಗೆ ವರ್ಗಾಯಿಸುವುದೇ ತಪ್ಪು ಎಂದು ವಿವರಿಸಲಾಗಿದೆ. ಆದ್ದರಿಂದ ಪರಿಶಿಷ್ಟರ ಗ್ಯಾರಂಟಿ ವೆಚ್ಚ ರೂ.ಗಳನ್ನು ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಹಣ ಬಳಸುವುದು ತಪ್ಪು. ಈ ಸಾಲಿನಲ್ಲಿ ಸರ್ಕಾರ ಗ್ಯಾರಂಟಿಗಳಿಗಾಗಿ 52000 ಕೋಟಿ ರೂ.ಗಳ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಈಗ ಪರಿಶಿಷ್ಟ ಸಮುದಾಯಗಳಿಗೆ ವ್ಯಯ ಮಾಡಬೇಕಾಗಿದ್ದ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಯೋಜನೆಗಳಿಗೆ ನಿಗದಿಯಾಗಿರುವ 39121 ಕೋಟಿ ರೂ.ಗಳ ಮೊತ್ತದಲ್ಲಿ 14282 ಕೋಟಿ ರೂ.ಗಳನ್ನು ಗ್ಯಾರಂಟಿ ಮೂಲಕ ಖರ್ಚು ಮಾಡುವ ತೀರ್ಮಾನ ಮಾಡಲಾಗಿದೆ. ಒಟ್ಟಾರೆ ಗ್ಯಾರಂಟಿ ವೆಚ್ಚದ ಶೇಕಡಾ 27ರಷ್ಟು ಹಣವನ್ನು ಪರಿಶಿಷ್ಟರಿಗೆಂದೇ ಮೀಸಲಿಡಬೇಕು. ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ನಿಧಿಯಿಂದ ವೆಚ್ಚ ಮಾಡುವ ಸರ್ಕಾರದ ನಿರ್ಧಾರ ಖಂಡನಾರ್ಹ ಎಂದು ಅವರು ಕಿಡಿಕಾರಿದರು.
ಹೀಗಾಗಿ ಸರ್ಕಾರದ ನೀತಿಯನ್ನು ವಿರೋಧಿಸಿ ಜುಲೈ 22ರಂದು ಬೆಳಿಗ್ಗೆ 11 ಗಂಟೆಗೆ ನಗರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮಯೆ ಬಳಿ ಇರುವ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ಕ್ರಾಂತಿ, ಮಹಾಂತೇಶ್ ಬಡದಾಳ್, ಮಲ್ಲಿಕಾರ್ಜುನ್ ಖನ್ನಾ, ಸೂರ್ಯಕಾಂತ್ ಆಜಾದಪೂರ್, ಕಪಿಲ್ ಸಿಂಗೆ, ಸಾಯಬಣ್ಣಾ ಕೊಟನೂರ್, ಪರಶುರಾಮ್ ರಾಜಾಪೂರ್ ಮುಂತಾದವರು ಉಪಸ್ಥಿತರಿದ್ದರು.