ಕಾನೂನು ಪಾಲನೆಯಿಂದ ಸಮಾಜದಲ್ಲಿ ಶಾಂತಿ
ಕಲಬುರಗಿ:ಜು.17:ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು. ಜಾತಿ, ಧರ್ಮ, ಭಾಷೆ, ಪ್ರಾಂತ್ಯ, ಲಿಂಗ, ಹಣ, ಪ್ರಭಾವ ನೋಡದೆ ಅನ್ಯಾಯಕ್ಕೊಳಗಾದವರಿಗೆ ಪ್ರಾಮಾಣಿಕವಾಗಿ ನ್ಯಾಯವನ್ನು ದೊರಕಿಸಿಕೊಡಲು ನ್ಯಾಯಾಂಗ ಶ್ರಮಿಸುತ್ತಿದೆ. ಎಲ್ಲರೂ ಸಂವಿಧಾನ, ಕಾನೂನು, ನ್ಯಾಯದ ಪಾಲನೆ ಮಾಡಿದರೆ ಸಮಾಜದಲ್ಲಿ ಶಾಂತಿ ನೆಲೆಸಿ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಡಾ.ಸುನೀಲಕುಮಾರ ಎಚ್.ವಂಟಿ ಅಭಿಮತ ವ್ಯಕ್ತಪಡಿಸಿದರು.
ನಗರದ ಸುಪರ್ ಮಾರ್ಕೆಟ್ ಪ್ರದೇಶದಲ್ಲಿರುವ ‘ಕಸ್ತೂರಬಾ ಬಾಲಕಿಯ ವಸತಿ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ನ್ಯಾಯ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜನಸಾಮಾನ್ಯರಿಗೆ ಕಾನೂನಿನ ಅರಿವು ಅಗತ್ಯ. ಬಸವಣ್ಣನವರ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ಸಪ್ತ ಸೂತ್ರದ ವಚನ ಅಳವಡಿಕೆ ಅಗತ್ಯ. ಕಾನೂನು ಪಾಲನೆ ಜೊತೆ ಮಾನವೀಯತೆ ಇರಲಿ. ವಿದ್ಯಾರ್ಥಿ ದೆಸೆಯಿಂದಲೇ ಪ್ರಶ್ಮಿಸುವ ಮನೋಭಾವ ಬೆಳಸಿಕೊಳ್ಳಿ. ಮಹಿಳೆಯರು ಆರ್ಥಿಕವಾಗಿ ಸಭಲರಾಗಿ. ಸಾಮಾನ್ಯ ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ತಿಳಿಸಿದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ‘ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು’ ತತ್ವದಂತೆ ಎಲ್ಲರಿಗೂ ನ್ಯಾಯ ಒದಗಿಸಿಕೊಡಬೇಕೆಂದು ಮಹಾತ್ಮ ಗೌತಮ ಬುದ್ಧ, ವಿಶ್ವಗುರು ಬಸವಣ್ಣ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹನೀಯರು ಶ್ರಮಿಸಿದ್ದಾರೆ. ಸಾಮಾಜಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ನ್ಯಾಯವು ದೊರೆಯಬೇಕು. ಕಾನೂನಿನ ಮುಂದೆ ಎಲ್ಲರು ಸಮಾನರಾಗಿದ್ದು, ಅದನ್ನು ಗೌರವಿಸಬೇಕು ಎಂದರು.
ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಾಲೆಯ ಸಿಬ್ಬಂದಿ ಸುವರ್ಣ ಗೋವಿಂದ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ನ್ಯಾಯದ ಮಹತ್ವವನ್ನು ಸಾರುವ ಗೀತೆಯನ್ನು ಹಾಡಿದರು. ಝಾಪುರ ಶಾಲೆಯ ಮುಖ್ಯ ಶಿಕ್ಷಕಿ ದೇವೇಂದ್ರಪ್ಪ ಗಣಮುಖಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿ ಜಯಶ್ರೀ ಶಿರವಾಳಕರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.