ಶಿವಮೊಗ್ಗ: ವರ್ಷಧಾರೆ ರೆಡ್ ಅಲರ್ಟ್
ಶಿವಮೊಗ್ಗ, ಜು. ೧೭: ಕಳೆದ ಕೆಲ ದಿನಗಳಿಂದ ಮಲೆನಾಡಿನಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಮತ್ತೊಂದೆಡೆ, ಹವಾಮಾನ ಇಲಾಖೆಯು ಇನ್ನೂ ಕೆಲ ದಿನಗಳವರೆಗೆ ಮಳೆ ಮುಂದುವರಿಕೆ ಮುನ್ಸೂಚನೆ ನೀಡಿದೆ. ಜು. ೧೭ ಮತ್ತು ಜು. ೧೮ ರಂದು ಭಾರೀ ವರ್ಷಧಾರೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದು, ಮತ್ತೇ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಎಡೆಬಿಡದೆ ಮಳೆಯಾಗುತ್ತಿದೆ. ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳು ಅಕ್ಷರಶಃ ತೊಯ್ದು ತೊಪ್ಪೆಯಾಗಿವೆ. ನದಿಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಸೃಷ್ಟಿಸುವ ಸಾಧ್ಯತೆಗಳು ಎದುರಾಗಿವೆ. ತುಂಗಾ, ಶರಾವತಿ, ವರದಾ, ಮಾಲತಿ, ದಂಡಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಸೃಷ್ಟಿಸಿವೆ.
ಕುಮದ್ವತಿ ನದಿ ನೀರು ಹೆಚ್ಚಳವಾಗಿರುವುದರಿಂದ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಸಾಗರದ ಕೊಲ್ಲಿಬಚ್ಚಲು ಆಣೆಕಟ್ಟು ಗರಿಷ್ಠ ಮಟ್ಟ ತಲುಪಿದೆ. ಲಿಂಗನಮಕ್ಕಿ, ತುಂಗಾ ಹಾಗೂ ಭದ್ರಾ ಡ್ಯಾಂಗಳಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ.
ಮಳೆ ವಿವರ : ಬುಧವಾರ ಬೆಳಿಗ್ಗೆ ೮ ಗಂಟೆಗೆ ಕೊನೆಗೊಂಡಂತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿ ೧೭೨ ಮಿಲಿ ಮೀಟರ್, ಯಡೂರು ೧೪೫ ಮಿ.ಮೀ., ಮಾಸ್ತಿಕಟ್ಟೆ ೧೭೦ ಮಿ.ಮೀ., ಚಕ್ರಾ ೧೧೩ ಮಿ.ಮೀ., ಸಾವೇಹಕ್ಲು ೧೪೦ ಮಿ.ಮೀ. ಮಳೆಯಾಗಿದೆ.
ಶಿವಮೊಗ್ಗ ೧೮. ೪೦ ಮಿ.ಮೀ., ಭದ್ರಾವತಿ ೧೬. ೬೦ ಮಿ.ಮೀ., ತೀರ್ಥಹಳ್ಳಿ ೮೧ ಮಿ.ಮೀ., ಸಾಗರ ೬೪. ೨೦ ಮಿ.ಮೀ., ಶಿಕಾರಿಪುರ ೧೬. ೮೦ ಮಿ.ಮೀ., ಸೊರಬ ೨೮. ೩೦ ಮಿ.ಮೀ. ಹಾಗೂ ಹೊಸನಗರದಲ್ಲಿ ೬೬. ೭೦ ಮಿ.ಮೀ. ಮಳೆಯಾಗಿದೆ.