ಮಂಗಲಸೂತ್ರ, ನಗದು ಕಳವು
ಕಲಬುರಗಿ,ಜು.17-ಮಹಿಳೆಯೊಬ್ಬರ ಮಂಗಳಸೂತ್ರ, 2 ಸಾವಿರ ರೂ.ನಗದು ಮತ್ತು 2 ಎಟಿಎಂ ಕಾರ್ಡ್ ಕಳವಾಗಿರುವ ಘಟನೆ ನಗರದ ಸುಪರ್ ಮಾರ್ಕೆಟ್‍ನಲ್ಲಿ ನಡೆದಿದೆ.
ಪ್ರಜ್ಞಾ ಪ್ರಶಾಂತ್ ಜಾಧವ್ ಎಂಬುವವರೆ ಮಂಗಳಸೂತ್ರ, 2 ಸಾವಿರ ರೂ.ನಗದು ಮತ್ತು 2 ಎಟಿಎಂ ಕಾರ್ಡ್ ಕಳೆದುಕೊಂಡಿದ್ದು, ಅವರು ಈ ಸಂಬಂಧ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರಂ ನಿವಾಸಿಯಾಗಿರುವ ಪ್ರಜ್ಞಾ ಅವರು ಕಲಬುರಗಿ ನಗರದಲ್ಲಿರುವ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಬಂದು ಬ್ರಹ್ಮಪುರದಲ್ಲಿರುವ ತವರು ಮನೆಯಲ್ಲಿ ಉಳಿದುಕೊಂಡಿದ್ದರು. ಕೊರಳಲ್ಲಿಯ ಕರಿಮಣಿಯ ಬಂಗಾರದ ಗುಂಡುಗಳುಳ್ಳ ಮಂಗಳಸೂತ್ರದಲ್ಲಿ ಹೊಸದಾಗಿ ಮಣಿ ಹಾಕಿಸಿ ಗಟಾಯಿಸಿಕೊಂಡು ಬರಲೆಂದು ಮಾರ್ಕೆಟ್‍ಗೆ ಹೋಗಿದ್ದರು. ಮಂಗಳಸೂತ್ರ ಗಟಾಯಿಸಿಕೊಂಡು ಮರಳಿ ಬರುವಾಗ ಸೈಡ್ ಪರ್ಸ್‍ನಲ್ಲಿ ಇಟ್ಟಿದ್ದ 30 ಸಾವಿರ ರೂ.ಮೌಲ್ಯದ ಮಂಗಳಸೂತ್ರ, 2 ಸಾವಿರ ರೂ.ನಗದು ಮತ್ತು 2 ಎಟಿಎಂ ಕಾರ್ಡ್ ಕಳವಾಗಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ತನಿಖೆ ನಡೆದಿದೆ.