ಲಲಿತ ಕಲೆಗಳಲ್ಲಿ ಸಂಗೀತ ಕಲೆ ಶ್ರೇಷ್ಠ
ಕಲಬುರಗಿ,ಜು.17-ಪುರಾತನ ಭಾರತೀಯ ಸಂಸ್ಕøತಿಯ ಆಧಾರಗಳೆ ಸಂಗೀತ, ಸಾಹಿತ್ಯ, ನೃತ್ಯ, ಶಿಲ್ಪಕಲೆಯಂತಹ ಲಲಿತಕಲೆಗಳು. ಈ ಎಲ್ಲ ಲಲಿತ ಕಲೆಗಳಲ್ಲಿ ಸಂಗೀತ ಕಲೆ ಶ್ರೇಷ್ಠವಾದದ್ದು ಎಂದು ರಾಮಚಂದ್ರ ನೆಲ್ಲೂರ ಅಭಿಪ್ರಾಯಪಟ್ಟವರು.
ಇಲ್ಲಿನ ಕೆ.ಕೆ.ನಗರದಲ್ಲಿ ಇತ್ತೀಚೆಗೆ ಗಡಿನಾಡ ಸಂಗೀತ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ಸುಗಮ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ನಮ್ಮ ಹಿರಿಯರು ಈ ಎಲ್ಲ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಅಪಾರವಾದುದ್ದು, ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಭಗವಂತನ ಸಾಧನೆಗಾಗಿ ಲಲಿತಕಲೆ ಉತ್ಪತ್ತಿಯಾಯಿತು ಎಂಬುದರ ಉಲ್ಲೇಖ ಪುರಾತನ ಗ್ರಂಥದಲ್ಲಿವೆ. ಭಾರತೀಯ ಪರಂಪರೆಯಲ್ಲಿ ಲಲಿತಕಲೆಗಳಲ್ಲಿ ಸಂಗೀತವು ಶ್ರೇಷ್ಠ ಸ್ಥಾನವನ್ನು ಪಡೆದಿದೆ. ಇದರ ಹುಟ್ಟು ಸಾಮವೇದದಿಂದಲೇ ಎಂಬುದು ಇತಿಹಾಸ ತಿಳಿಸುತ್ತದೆ. ಜಗತ್ತಿನಲ್ಲಿ ತನ್ನದೇ ಆದ ಮಾನ್ಯತೆ ಮತ್ತು ಇತಿಹಾಸ ಪೂರ್ಣ ಸೊಬಗನ್ನು ಹೊಂದಿದ ಸಂಗೀತವು ಕೇಳುಗನನ್ನು ದೈವಿಕವಾದ ಆತ್ಮಾನಂದದತ್ತ ಕರೆದೊಯ್ಯುವ ಶಕ್ತಿಯನ್ನು ಹೊಂದಿದೆ. ಸಂಗೀತಕ್ಕೆ ಪ್ರಕೃತಿಯೇ ತಾಯಿ ಎಂಬ ಮಾತಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಸಯ್ಯ ಸ್ವಾಮಿ ಹಿರೇಮಠ, ಅನೀಲಕುಮಾರ ಪಾಟೀಲ, ರಘುನಾಥ ಸೂರ್ಯವಂಶಿ ಹಾಗೂ ಸಂಸ್ಥೆಯ ಅಧ್ಯಕ್ಷ ವೀರಭದ್ರಯ್ಯ ಸ್ಥಾವರಮಠ ಭಾಗವಹಿಸಿದರು ನಂತರ ನಡೆದ ಸುಗಮ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ, ಚಂದ್ರಕಲಾ ಊಡಪಿ, ಗುಂಡಪ್ಪಾ ನೆಲ್ಲೂರ, ಕು. ಭಾಗ್ಯಶ್ರೀ ಟೆಂಗಳಿ, ಗುರುಲಿಂಗಯ್ಯ ಹಿರೇಮಠ ಸುಗಮ ಸಂಗೀತ ಕಾರ್ಯಕ್ರಮ ನೀಡಿದರು. ಸವಿತಾ ಸ್ಥಾವರಮಠ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.