ಖಾಸ್ಗತ ಜಾತ್ರೋತ್ಸವದಲ್ಲಿ ಭಕ್ತರಿಗೆ ಜಿಲೇಬಿ ಪ್ರಸಾದ
ತಾಳಿಕೋಟೆ:ಜು.17: ಐತಿಹಾಸಿಕ ಹಿನ್ನೇಲೆಹೊಂದಿರುವ ತಾಳಿಕೋಟೆ ನಗರಿ ಸದ್ಯ ಧಾರ್ಮಿಕ ಮತ್ತು ದಾಸೋಹ ಕ್ಷೇತ್ರದಲ್ಲಿಯೂ ಕೂಡಾ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದು ಸದ್ಯ ಶ್ರೀ ಖಾಸ್ಗತೇಶ್ವರ ಜಾತ್ರೆ ನಡೆದಿರುವದರಿಂದ ನಿತ್ಯ ದಾಸೋಹದ ವಿವಿಧತೆ ಪ್ರಸಾದದಲ್ಲಿ ಈ ಭಾರಿ 50 ಸಾವಿರಕ್ಕೂ ಮೇಲ್ಪಟ್ಟು ಭಕ್ತರಿಗೆ ನಿತ್ಯ ಫಕ್ವಾನ ಭೋಜನದ ಪ್ರಸಾದದ ಜೊತೆಗೆ ಜಿಲೇಬಿ ಪ್ರಸಾದ ಸಿಗಲಿದೆ.
ರಾಜ್ಯದ ಧಾರ್ಮಿಕ ಕ್ಷೇತ್ರದ ಮಠಗಳಲ್ಲಿಯೇ ಅತ್ಯಂತ ಹೆಸರು ಮಾಡಿರುವ ತಾಳಿಕೋಟೆಯ ಶ್ರೀ ಖಾಸ್ಗತಮಠವು ಲಕ್ಷಾಂತರ ಭಕ್ತಸಮೂಹವನ್ನು ಹೊಂದಿದ ಮಠವಾಗಿದೆ ಶ್ರೀ ಖಾಸ್ಗತರ ಜಾತ್ರೆಗೆ ಈ ಭಾಗದಲ್ಲಿ ಅಜ್ಜನ ಜಾತ್ರೆ ಎಂದೇ ಅತ್ಯಂತ ಪ್ರಚಲಿತಹೊಂದಿರುವ ಶ್ರೀ ಖಾಸ್ಗತ ಮಠದಲ್ಲಿ ಜಾತ್ರಾ ನಿಮಿತ್ಯವಾಗಿ ಇಂದು ದಿ.17 ಮತ್ತು 18 ರಂದು ಭಕ್ತರಿಗೆ ಜಿಲೇಬಿ ಪ್ರಸಾದದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಹಿಂದಿನ ಪೀಠಾಧೀಪತಿ ಲಿಂ.ವಿರಕ್ತ ಮಹಾಸ್ವಾಮಿಗಳ ನುಡಿಯಂತೆ ಅವರ ಮೇಲೆ ಭಕ್ತರು ಇಟ್ಟಿದ್ದ ಭಕ್ತಿ, ಪ್ರೀತಿ, ವಾತ್ಸಲ್ಯ ಈಗಲೂ ಕೂಡಾ ಮಠದ ಮೇಲೆ ಭಕ್ತರು ತೋರಿಸುತ್ತಿದ್ದು ವಿರಕ್ತಶ್ರೀಗಳ ದಾರಿಯಲ್ಲಿ ಈಗೀನ ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರು ಕೂಡಾ ಭಕ್ತರೇ ಶ್ರೀಮಠದ ಆಸ್ತಿ ಎಂದು ಸಾರಿ ಸಾರಿ ಹೇಳುತ್ತಿದ್ದು ಇದರಿಂದ ಲಿಂ.ವಿರಕ್ತಶ್ರೀಗಳ ಮೇಲಿನ ಪ್ರೀತಿ ಇನ್ನಷ್ಟು ಇಮ್ಮಡಿಗೊಳಿಸುವಂತೆ ಮಾಡಿದೆ ಅಲ್ಲದೇ ಶ್ರೀ ಖಾಸ್ಗತಮಠದ ಮೇಲಿನ ಭಕ್ತಿ ನಂಬಿಕೆ ಇನ್ನಷ್ಟು ಹೆಚ್ಚಲು ಕಾರಣವಾಗಿದೆ.
ಶ್ರೀ ಖಾಸ್ಗತ ಮಠದ ಜಾತ್ರೋತ್ಸವದ ದಾಸೋಹ ವ್ಯವಸ್ಥೆಗೆ ಎಲ್ಲ ಗ್ರಾಮ ಪಟ್ಟಣಗಳಿಂದ ಅವಶ್ಯಕ ದವಸ ದಾನ್ಯಗಳಲ್ಲದೇ ರೋಟ್ಟಿ ಇನ್ನಿತರಗಳನ್ನು ಭಕ್ತಾಧಿಗಳು ಅರ್ಪಿಸುತ್ತಿದ್ದು ಭಕ್ತಾಧಿಗಳು ನೀಡಿದ ದವಸ್ಯ ದಾನ್ಯಗಳಿಂದ ನಿತ್ಯ ವಿವಿಧ ರೀತಿಯ ಪ್ರಸಾದವನ್ನು ತಯಾರಿಸಿ ಭಕ್ತಾಧಿಗಳಿಗೆ ಯಾವುದೇ ರೀತಿಯ ಕೊರತೆ ಬಿಳ್ಳದ ಹಾಗೆ ಶ್ರೀಮಠದಿಂದ ನೋಡಿಕೊಳ್ಳಲಾಗುತ್ತಿದೆ.
ಪ್ರತೀ ವರ್ಷದಂತೆ ಈ ಸಲುವೂ ಸಜ್ಜಕ ತುಪ್ಪದ ಊಟ ಭಕ್ತರಿಗೆ ಉಣಬಡಿಸಲಾಗಿದೆ ಅದರ ಜೊತೆಗೆ ಶ್ರೀಮಠದ ಬಾಲಶಿವಯೋಗಿ ಶ್ರೀಗಳ ಮಾತಿನಂತೆ ಜಿಲೇಬಿ ಪ್ರಸಾದವನ್ನು 50 ಸಾವಿರಕ್ಕೂ ಮೇಲ್ಪಟ್ಟು ಭಕ್ತರಿಗೆ ಉಣಬಡಿಸುವ ಸಲುವಾಗಿ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
ಜಾತ್ರೆಗೆ ಪಟ್ಟಿ ಎತ್ತುವ ಕಾರ್ಯ ಸ್ಥಗಿತ :-
ಈ ಹಿಂದೆ ಜಾತ್ರೆಯ ಸಮಯದಲ್ಲಿ ಭಕ್ತಾಧಿಗಳ ಮನೆ ಮನೆಗೆ ಶ್ರೀ ಖಾಸ್ಗತರ ಫಲ್ಲಕ್ಕಿಯೊಂದಿಗೆ ಪಟ್ಟಿ(ದೇಣಿಗೆ) ಸಂಗ್ರಹ ಮಾಡಲಾಗುತ್ತಿತ್ತು ಆದರೆ ಕಳೆದ ಮೂರು ವರ್ಷಗಳಿಂದ ಶ್ರೀಮಠದಿಂದ ದೇಣಿಗೆ(ಪಟ್ಟಿ ಎತ್ತುವ ಕಾರ್ಯವನ್ನು ಶ್ರೀಮಠದ ಬಾಲ ಶಿವಯೋಗಿ ಶ್ರೀಸಿದ್ದಲಿಂಗದೇವರು ಸ್ಥಗಿತಗೊಳಿಸಿದ್ದಾರೆ. ಸದ್ಯ ಶ್ರೀಮಠಕ್ಕೆ ಭಕ್ತರೇ ಬಂದು ಜಾತ್ರೆ ಉತ್ಸವದ ಜೊತೆಗೆ ದಾಸೋಹದ ವ್ಯವಸ್ಥೆಗೆ ತಮ್ಮ ಕೈಲಾದಷ್ಟು ಕಾಣಿಕೆ, ದವಸ ದಾನ್ಯಗಳನ್ನು ನೀಡಿ ಈ ಹಿಂದಿನಂತೆ ಶ್ರೀಮಠದ ಮೇಲೆ ತಮ್ಮ ಭಕ್ತಿ, ಪ್ರೀತಿಯನ್ನು ತೋರಿಸಿ ತೆರಳುತ್ತಿದ್ದಾರೆ.