160 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ
ಬೀದರ್: ಜು.17:ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಪರೀಕ್ಷೆಗಳಲ್ಲಿ ಸಾಧನೆಗೈದ ಜಿಲ್ಲೆಯ ಗೊಂಡ(ಕುರುಬ) ಸಮಾಜದ 160 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಪಾಲಕರನ್ನು ಸಹ ಸನ್ಮಾನಿಸಲಾಯಿತು.
ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿಯಲ್ಲಿ ಶೇ 80ಕ್ಕೂ ಅಧಿಕ ಅಂಕ ಗಳಿಸಿದ, ಜೆಇಇ ಮೇನ್ಸ್, ಕೆಸಿಇಟಿ ಹಾಗೂ ನೀಟ್‍ನಲ್ಲಿ ಉತ್ತಮ ಯಾರ್ಂಕ್ ಪಡೆದ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಪ್ರಮಾಣ ಪತ್ರ ನೀಡಿ ಪೆÇ್ರೀತ್ಸಾಹಿಸಲಾಯಿತು.
ಗೊಂಡ(ಕುರುಬ) ಸಮಾಜದ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿ ಉನ್ನತ ವ್ಯಕ್ತಿಗಳಾಗಿ ಹೊರ ಹೊಮ್ಮಬೇಕು. ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಹೇಳಿದರು.
ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಗೊಂಡ ಸಮಾಜದವರು ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಾಧ್ಯವಾದ ನೆರವು ಒದಗಿಸಲಾಗುವುದು ಎಂದು ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ರಘುನಾಥರಾವ್ ಮಲ್ಕಾಪುರೆ ಹೇಳಿದರು.
ಗೊಂಡ (ಕುರುಬ) ಸಮಾಜಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಕ್ಕೆ ಕೇಂದ್ರಕ್ಕೆ ನಿಯೋಗ ಒಯ್ಯಲಾಗುವುದು. ಗೊಂಡ ಹಾಗೂ ಕುರುಬ ಪರ್ಯಾಯ ಪದವಾಗಿ ಪರಿಗಣಿಸಲು ಮನವರಿಕೆ ಮಾಡಲಾಗುವುದು ಎಂದು ಸಾನಿಧ್ಯ ವಹಿಸಿದ್ದ ತಿಂಥಣಿ ಬ್ರಿಡ್ಜ್ ಕನಕ ಗುರುಪೀಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ತಿಳಿಸಿದರು.
ಸಮಾಜದ ವಿದ್ಯಾರ್ಥಿಗಳನ್ನು ಸಾಧನೆಗೆ ಪ್ರೇರೇಪಿಸಲು ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ. ಸಂಘ ಬರುವ ದಿನಗಳಲ್ಲೂ ಇನ್ನೂ ಹಲವು ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಹೇಳಿದರು.
ಕಲಾವಿದರಾದ ಮಲ್ಲಿಕಾರ್ಜುನ ಚಿಕ್ಕಪೇಟೆ, ಶಾಂತಮ್ಮ ಡೊಣಗಾಪುರೆ, ದಿವ್ಯ ಮೇತ್ರೆ, ಭಾಗ್ಯಶ್ರೀ ದುರ್ಗೆ, ಭವಾನಿ ವಗ್ಗೆ, ಎಂ.ಪಿ. ಕುಮಾರ್, ಕೃಷ್ಣರಾಜ್ ಜೋಳದಾಪಕೆ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಮುಖಂಡರಾದ ಪಂಡಿತರಾವ್ ಚಿದ್ರಿ, ಮಲ್ಲಿಕಾರ್ಜುನ ಬಿರಾದಾರ(ಪರಿಹಾರ), ಎಂ.ಎಸ್. ಕಟಗಿ, ಬಸವರಾಜ ಮಾಳಗೆ, ಶರಣಪ್ಪ ವಡಗಾಂವ್, ಮಾಳಪ್ಪ ಅಡಸಾರೆ, ಪೀರಪ್ಪ ಯರನಳ್ಳೆ, ಡಾ. ಜಿ.ಬಿ. ಮಲ್ಲಿಕಾರ್ಜುನ, ಸುಚಿತಾನಂದ ಮಲ್ಕಾಪುರೆ, ಸುಭಾಷ್ ನಾಗೂರೆ, ದೇವಪ್ಪ ಚಾಂಬೋಳೆ, ಭೀಮಶಾ ಬಸಲಾಪುರ, ಲೋಕೇಶ ಮೇತ್ರೆ, ದೀಪಕ್ ಚಿದ್ರಿ, ನರಸಪ್ಪ ಜಾನಕನೋರ್, ಶಿವಕುಮಾರ ಕುಪ್ಪೆ, ವೈಜಿನಾಥ ಬಿರಾದಾರ, ಅನ್ನಪೂರ್ಣೇಶ್ವರಿ ಬಿರಾದಾರ, ಬಕ್ಕಪ್ಪ ನಾಗೋರಾ, ಕಲ್ಲಪ್ಪ ರಾಯಗೊಂಡ, ರವಿ ಜನವಾಡ ಮತ್ತಿತರರು ಇದ್ದರು.
ವಿಜಯಕುಮಾರ ಬ್ಯಾಲಹಳ್ಳಿ, ಎಂ.ಪಿ. ವೈಜಿನಾಥ ನಿರೂಪಿಸಿದರು. ಸುನೀಲ್ ಚಿಲ್ಲರ್ಗಿ ವಂದಿಸಿದರು.