63 ಸಾವಿರ ಕ್ಯೂಸೆಕ್ ಗೆ ಹೆಚ್ಚಿದ  ತುಂಗಭದ್ರ ಒಳಹರಿವು  ಕಾಲುವೆಗಳಿಗೆ ನೀರು
* ಎಲ್ ಎಲ್ ಸಿಗೆ ಬಿಟ್ಟ ನೀರು
* ನಾಳೆಯಿಂದ ಎಡದಂಡೆ ಕಾಲೂವೆಗಳಿಗೂ ನೀರು
* ಹೆಚ್ ಎಲ್ ಸಿಗೆ ಆಂದ್ರ ಕೋಟದ ಬೇಡಿಕೆಯ ನಿರೀಕ್ಷೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಮಲೆನಾಡಿನಲ್ಲಿ ಸತತವಾಗಿ ಸುರಿಯುತ್ತಿರುವ
ಮಳೆಯಿಂದಾಗಿ ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರ ಜಲಾಶಯಕ್ಕೆ ಇಂದು  ಬೆಳಿಗ್ಗೆ 8 ಗಂಟೆ ಸಮಯದಲ್ಲಿ 63320  ಕ್ಯೂಸೆಕ್ ನೀರು ಹರಿದು ಬರುತ್ತಿರುವುದು. ಕಳೆದ ವರ್ಷ ಮಳೆ ಅಭಾವದಿಂದ ಜಲಾಶಯ ಭರ್ತಿಯಾಗದೇ ಒಂದೇ ಬೆಳೆ ಪಡೆದಿದ್ದ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದ್ದು ಇಂದು ಸಚಿವ ಶಿವರಾಜ್ ತಂಗಡಗಿ ಅವರ ಸೂಚನೆಯಂತೆ ತುಂಗಭದ್ರ ಮಂಡಳಿ ಅಧಿಕಾರಿಗಳು ಜಲಾಶಯದ ಬಲದಂಡೆ ಕೆಳ ಮಟ್ಟದ(ಎಲ್ ಎಲ್ ಸಿ) ಕಾಲುವೆಗೆ ನೀರು ಹರಿ ಬಿಟ್ಟಿದ್ದಾರೆ.
ಸಧ್ಯ ತುಂಗಾ ಜಲಾಶಯದಿಂದ  70497 ಕ್ಯೂಸೆಕ್ ನೀರು ಹರಿಬಿಟ್ಟಿರುವುದರಿಂದ ತುಂಗಭದ್ರ  ಜಲಾಶಯಕ್ಕೆ ಮತ್ತಷ್ಟು ನೀರು ಹರಿದು ಬರುವುದು ಖಚಿತವಾಗಿದೆ. ಜಲಾಶಯದ ಗರಿಷ್ಟ ಮಟ್ಟ 1633 ಅಡಿ ಇದ್ದು. ಇಂದು 1611 ಕ್ಕೆ ತಲುಪಿದೆ. ಜಲಾಶಯದಲ್ಲಿ ಈಗಾಗಲೇ 40 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಒಟ್ಟು ಸಾಮರ್ಥ 105.78 ಟಿಎಂಸಿಯಾಗಿದೆ.
ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಜಮೀನುಗಳನ್ನು ಹದ ಮಾಡಿಕೊಂಡು, ಭತ್ತದ ನಾಟಿ, ಮೆಣಸಿನಕಾಯಿ, ಮುಸುಕಿನಜೋಳ, ಹತ್ತಿ ಮೊದಲಾದ ಬೆಳೆ ಬಿತ್ತನೆಗೆ ಸಜ್ಜಾಗಿದ್ದರು.
ಕಾಲುವೆಗಳಿಗೆ ನೀರು:
ಸಧ್ಯ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ನೋಡಿದರೆ. ನಾಳೆಗೆ ಜಲಾಶಯದ ಸಂಗ್ರಹ ಸಾಮರ್ಥ 50 ಟಿಎಂಸಿ ದಾಟಲಿದೆ. ಹಾಗಾಗಿ ಕೃಷಿ ಚಟುವಟಿಕೆಗೆ ಎಡ ಮತ್ತು ಬಲದಂಡೆಯ ಕೆಳ ಹಾಗು ಮೇಲ್ಮಟ್ಟದ  ಕಾಲುವೆಗಳಿಗೆ  ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆ ಕರೆದು ತೀರ್ಮಾನಿಸಬೇಕಿತ್ತು. ಸಭೆ ಕರೆಯುವುದು ವಿಳಂಬವಾಗುವುದರಿಂದ ಇಂದು ಶಾಸಕರುಗಳ ಜೊತೆ ಮಾತನಾಡಿ  ಕಾಲುವೆಗಳಿಗೆ ನೀರು ಬಿಡಲು ಸೂಚಿಸಿದೆಂದು ಸಂಜೆವಾಣಿಯೊಂದಿಗೆ ಮಾತನಾಡಿದ,  ತುಂಗಭದ್ರ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಜ್ ತಂಗಡಿ ಅವರು ಹೇಳಿದ್ದಾರೆ
ಉತ್ತಮಕಾರ್ಯ:
ಕಾಲುವೆಗಳಿಗೆ ನೀರು ಬಿಡಲು ತುಂಗಾಭದ್ರ ಜಲಾಶಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಬಸವರಾಜ್ ಅವರಿಗೆ  ಸಚಿವ ಶಿವರಾಜ್ ತಂಗಡಗಿಯವರು  ಆದೇಶ ನೀಡಿರುವುದರಿಂದ ಈ ದಿನ ಬೆಳಿಗ್ಗೆ ಎಲ್.ಎಲ್.ಸಿ ಕಾಲುವೆಗೆ ಕರ್ನಾಟಕ ಮತ್ತು ಆಂಧ್ರ ಕೋಟಾದ ನೀರನ್ನು ಬಿಡಲು ಪ್ರಾರಂಭಿಸಿರುತ್ತಾರೆ ಇದು ಉತ್ತಮಕಾರ್ಯವಾಗಿದೆ.
ಹೆಚ್.ಎಲ್.ಸಿ ಕಾಲುವೆಗೆ ಆಂಧ್ರ ಕೋಟದಿಂದ ನೀರು ಬಿಡುವಂತೆ ಮನವಿ ಬಂದಿಲ್ಲ. ಇನ್ನೆರೆಡು  ದಿನಗಳಲ್ಲಿ ಬರಬಹುದು. ಬಂದ ತಕ್ಷಣ ಕರ್ನಾಟಕ ಮತ್ತು ಆಂಧ್ರ ಕೋಟಾದ ನೀರನ್ನು ಹೆಚ್.ಎಲ್.ಸಿ ಕಾಲುವೆಗೆ ಸಹ ನೀರು ಬಿಡುತ್ತೇವೆಂದು .
ತುಂಗಾಭದ್ರ ಜಲಾಶಯದ ಎಡಭಾಗದ ಎಲ್.ಬಿ.ಎಮ್.ಸಿ ಕಾಲುವೆ ಹಾಗೂ ರಾಯ, ಬಸವ ಕಾಲುವೆಗಳಿಗೆ ನಾಳೆ ಜು.18 ರಿಂದ ನೀರು ಬಿಡಲು ಪ್ರಾರಂಭಿಸುತ್ತೇವೆ ಎಂದು ಜಲಾಶಯದ ಮುಖ್ಯ ಕಾರ್ಯದರ್ಶಿ ಬಸವರಾಜ್ ಅವರು ದೂರವಾಣಿಯಲ್ಲಿ ತಿಳಿಸಿರುತ್ತಾರೆಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಹೇಳಿದ್ದಾರೆ. 
,