ಕವಿರಾಜಮಾರ್ಗದಲ್ಲಿ ಪರಧರ್ಮವನ್ನು ಗೌರವಿಸುವ ವಿಚಾರವಿದೆ -ನುಗಡೋಣಿ
ಬಳ್ಳಾರಿ ಜು,17: ಪರ ಧರ್ಮವನ್ನು ಗೌರವಿಸುವ, ಪರ ವಿಚಾರವನ್ನು ಸಹಿಸುವ ಅತ್ಯುತ್ತಮ ಆಶಯವೊಂದು ಕನ್ನಡದ ಮೊದಲ ಲಾಕ್ಷಣಿಕ ಗ್ರಂಥವಾದ ‘ಕವಿರಾಜಮಾರ್ಗ’ ದಲ್ಲಿಯೇ ಅಭಿವ್ಯಕ್ತಿಗೊಂಡಿದೆ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಅಮರೇಶ ನುಗಡೋಣಿ ನುಡಿದರು.
ಅವರು ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ‘ ‌ಸಾಹಿತ್ಯ : ಧರ್ಮ, ಸಮಾಜ ಅಂತರ ಸಂಬಂಧ ‘  ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಡುವ ವರ್ತಮಾನದಲ್ಲಿ ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆಗಳಾಗಿರುವುದು ವಿಷಾದದ ಸಂಗತಿ.ನಾವಿಂದು ಸುಳ್ಳು ಮತ್ತು ಸತ್ಯಗಳ ನಡುವಿನ ಸಂಘರ್ಷದ ಕಾಲದಲ್ಲಿ ಬದುಕುತಿದ್ದೇವೆ. ಮುಖ್ಯವಾಗಿ ಸಾಹಿತ್ಯ ಚಿಂತನೆಗೆ ಹಚ್ಚುತ್ತಲೇ ಸಮಾಜವನ್ನು ಹೊಸ ಬಗೆಯಲ್ಲಿ ನೋಡುವ ದೃಷ್ಟಿಕೋನವನ್ನು ಕೊಡುತ್ತದೆ ಎಂದರು.
ಮನುಷ್ಯ ಜಾತಿ ತಾನೊಂದೇ ವಲಂ ಎಂದು ಪಂಪ ಹೇಳಿದರೆ ಶರಣರು ದಯವೇ ಧರ್ಮದ ಮೂಲವೆಂದು ಹೇಳುವುದರ ಮೂಲಕ ಧರ್ಮದ ವ್ಯಾಖ್ಯಾನವನ್ನು ವಿಶಾಲಗೊಳಿಸಿದರು ಎಂದು ವಿಶ್ಲೇಷಿಸಿದರು. ಬುದ್ಧನು ಲೋಕದಲ್ಲಿ ದೇವರಿಲ್ಲ ಎಂದರೆ, ಬಸವಣ್ಣ ಗುಡಿಗಳಿಲ್ಲದ ಕಾಯಕ ಜೀವಿಗಳಲ್ಲಿ ದೇವರನ್ನು ಕಂಡರು ಎಂದು ಮಾರ್ಮಿಕವಾಗಿ ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ದಸ್ತಗೀರಸಾಬ್ ದಿನ್ನಿ ನಮ್ಮ ಕನ್ನಡ ಸಾಹಿತ್ಯ ಪರಂಪರೆ ಮಾನವೀಯ ಮೌಲ್ಯ ,ಜೀವಪರ ಚಿಂತನೆ ,ಬಹುತ್ವವನ್ನು ಸಮಾಜದಲ್ಲಿ ಬಿತ್ತಿದೆ.ಆ ಮೂಲಕ ಮನುಷ್ಯ ಧರ್ಮವನ್ನು  ಎತ್ತಿ ಹಿಡಿದಿದೆ. ಈ ಹೊತ್ತಿನ ಸಮಾಜದಲ್ಲಿ ಎಲ್ಲೆಡೆ ಹಿಂಸೆ, ಅಸೂಯೆ ,       ಅತ್ಯಾಚಾರ , ಅನ್ಯಾಯ,ಏಕತ್ವದ ಸಂಸ್ಕೃತಿ, ಮುಖವಾಡಗಳ ಬದುಕೇ ವಿಜೃಂಭಿಸುತ್ತಿದೆ . ಇಂತಹ ಪ್ರಕ್ಷುಬ್ಧ ಸನ್ನಿವೇಶದಲ್ಲಿ ಸಾಹಿತ್ಯದ ಓದು ಮಾತ್ರ ನಮ್ಮ ಒಳಗಣ್ಣು ತೆರೆಸಿ, ಮಾನವೀಯ ಸಂವೇದನೆಯನ್ನು ರೂಪಿಸಬಲ್ಲದು.ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಓದಿನ ಬಗೆಗೆ ಹಂಬಲವನ್ನು , ಅರಿವನ್ನು ವಿಸ್ತರಿಸುವ ಕಾರ್ಯಕ್ರಮವಿದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ಹೆಚ್.ಕೆ. ಮಂಜುನಾಥ ರೆಡ್ಡಿ ಮನುಷ್ಯ ಅತ್ಯುತ್ತಮವಾಗಿ ಬಾಳುವುದಕ್ಕೆ ಸಾಹಿತ್ಯ ಮಾರ್ಗದರ್ಶನ ಮಾಡುತ್ತದೆ  ಎಂದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಡಾ.ಹೊನ್ನೂರಾಲಿ ,ಅಧ್ಯಾಪಕರಾದ ಬಿ.ರಾಮಸ್ವಾಮಿ, ಪ್ರವೀಣ್ ಕುಮಾರ್ ,ಲಿಂಗಪ್ಪ, ಡಾ.ಬಸಪ್ಪ , ಚಂದ್ರಶೇಖರ್ , ಮಹಾಂತೇಶ, ಸಿ.ಮಂಜುನಾಥ ,ಲೇಖಕರಾದ ಡಾ.ಶಿವಲಿಂಗಪ್ಪ ಹಂದಿಹಾಳು, ವೀರೇಂದ್ರ ರಾವಿಹಾಳ್, ಡಾ.ಸಿದ್ದೇಶ್ವರಿ,ಮಲ್ಲಪ್ಪ, ಗೋವರ್ಧನ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
One attachment • Scanned by Gmail